Pro Kabaddi League: ಮತ್ತೆ ಗೆಲುವಿನ ಹಾದಿಗೆ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್ ಬೆವರಿಳಿಸಿದ ಗೂಳಿಗಳು

ಬೆಂಗಳೂರು: ಸತತ ಎರಡು ಸೋಲುಗಳ ಆಘಾತದಿಂದ ಚೇತರಿಸಿಕೊಂಡಿರುವ ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ (Bengaluru Bulls vs Tamil Thalaivas) ತಂಡವನ್ನು 17 ಅಂಕಗಳ ಅಂತರದಿಂದ ಮಣಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಂಪುಗೂಳಿಗಳು ತಮಿಳ್ ತಲೈವಾಸ್ ತಂಡವನ್ನು 45-28ರಿಂದ ಮಣಿಸಿದರು.

ಕಳೆದ ಎರಡು ಪಂದ್ಯಗಳನ್ನು ಸೋತು ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದ ಬೆಂಗಳೂರು ಬುಲ್ಸ್ ಬಳಗ, 5ನೇ ಲೀಗ್ ಪಂದ್ಯದಲ್ಲಿ ಭರ್ಜರಿ ಆಟವಾಡಿತು. ಆರಂಭದಿಂದಲೇ ಮುನ್ನಡೆ ಪಡೆದ ಕೆಂಪು ಗೂಳಿಗಳ ತಂಡ, ತಮಿಳ್ ತಲೈವಾಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. 6ನೇ ಆವೃತ್ತಿಯ ಲೀಗ್’ ನಲ್ಲಿ ಬೆಂಗಳೂರು ಬುಲ್ಸ್’ಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದ ಸ್ಟಾರ್ ರೇಡರ್ ಪವನ್ ಸೆಹ್ರಾವತ್ ಈ ಬಾರಿಯ ಲೀಗ್’ನಲ್ಲಿ ತಮಿಳ್ ತಲೈವಾಸ್ ತಂಡದ ಸೇರಿದ್ದಾರೆ. ಆದರೆ ಆಡಿದ ಮೊದಲ ಪಂದ್ಯದಲ್ಲೇ ಗಾಯಗೊಂಡಿರುವ ಸೆಹ್ರಾವತ್ ಕಳೆದ 4 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಪವನ್ ಅನುಪಸ್ಥಿತಿಯ ಲಾಭ ಪಡೆದ ಬೆಂಗಳೂರು ಬುಲ್ಸ್ ತಮಿಳ್ ತಲೈವಾಸ್ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿತು. ಪ್ರಥಮಾರ್ಧದಲ್ಲಿ 18-12ರಲ್ಲಿ ಮುನ್ನಡೆ ಸಾಧಿಸಿದ್ದ ಬುಲ್ಸ್ ಬಳಗ ದ್ವಿತೀಯಾರ್ಧದ 20 ನಿಮಿಷಗಳ ಆಟದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿ 27 ಅಂಕಗಳನ್ನು ಕಲೆ ಹಾಕಿತು. ತಂಡದ ಪರ ಯುವ ರೇಡರ್ ಭರತ್ 12 ಅಂಕಗಳನ್ನು ಗಳಿಸಿದರೆ, ವಿಕಾಸ್ ಖಂಡೋಲ 7 ರೇಡ್ ಪಾಯಿಂಟ್ಸ್ ಸಂಪಾದಿಸಿದರು.ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2 ಸೋಲುಗಳೊಂದಿಗೆ ಒಟ್ಟು 16 ಪಾಯಿಂಟ್ಸ್ ಗಳಿಸಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ ಯೋಧಾ ಸವಾಲನ್ನು 51-45ರ ಅಂತರದಲ್ಲಿ ಮೆಟ್ಟಿ ನಿಂತ ಗುಜರಾತ್ ಜೈಂಟ್ಸ್ ಲೀಗ್’ನಲ್ಲಿ 2ನೇ ಗೆಲುವು ತನ್ನದಾಗಿಸಿಕೊಂಡಿತು. ಜೈಂಟ್ಸ್ ಪರ ನಾಯಕ ಚಂದ್ರನ್ ರಂಜಿತ್ 20 ರೇಡ್ ಪಾಯಿಂಟ್ಸ್ ಗಳಿಸಿದರೆ, ರಾಕೇಶ್ ಅನ್ರೋಯಾ 16 ಪಾಯಿಂಟ್ಸ್ ಗಳಿಸಿದರು. ಯು.ಪಿ ಯೋಧ ಪರ ರೇಡ್ ಮಷಿನ್ ಪ್ರದೀಪ್ ನರ್ವಾಲ್ 17 ಅಂಕ ಗಳಿಸುವ ಮೂಲಕ ಕೊನೆಗೂ ತಮ್ಮ ಖ್ಯಾತಿಗೆ ತಕ್ಕ ಆಟ ಪ್ರದರ್ಶಿಸಿದರು. ಪ್ರೊ ಕಬಡ್ಡಿ ಲೀಗ್’ನಲ್ಲಿ ಗುರುವಾರ ವಿರಾಮದ ದಿನವಾಗಿದ್ದು ಶುಕ್ರವಾರ ಒಟ್ಟು 3 ಪಂದ್ಯಗಳು ನಡೆಯಲಿವೆ.

ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು

  1. ಯು ಮುಂಬಾ Vs ಹರ್ಯಾಣ ಸ್ಟೀಲರ್ಸ್
  2. ಪುಣೇರಿ ಪಲ್ಟನ್ Vs ಬೆಂಗಾಲ್ ವಾರಿಯರ್ಸ್
  3. ಪಾಟ್ನಾ ಪೈರೇಟ್ಸ್ Vs ದಬಾಂಗ್ ಡೆಲ್ಲಿ ಕೆ.ಸಿ

ಸ್ಥಳ: ಶ್ರೀ ಕಂಠೀರವ ಒಳಾಂಗಣದ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್‌

ಇದನ್ನೂ ಓದಿ : BCCI vs PCB: “ನೀವು ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ” ಬಿಸಿಸಿಐಗೆ ಪಾಕ್ ಕ್ರಿಕೆಟ್ ಬೋರ್ಡ್ ಧಮ್ಕಿ

ಇದನ್ನೂ ಓದಿ : Tamil Thalaivas : ಪಾಟ್ನಾ ವಿರುದ್ಧ ರೋಚಕವಾಗಿ ಗೆದ್ದ ತಮಿಳ್ ತಲೈವಾಸ್, ದಬಾಂಗ್ ಡೆಲ್ಲಿಗೆ ಸತತ 5ನೇ ಜಯ

Bengaluru Bulls vs Tamil Thalaivas are sweaty Bengaluru bulls on their way to victory again Pro Kabbadi League

Comments are closed.