Rajya Sabha elections : ರಾಜಕೀಯ ಗುರು ದೇವೇಗೌಡರಿಗೆ ತಿರುಮಂತ್ರ ಹಾಕಿದ ಸಿದ್ಧರಾಮಯ್ಯ : ಜೆಡಿಎಸ್‌ನ ಕುಪೇಂದ್ರ ರೆಡ್ಡಿಗಿಲ್ಲ ಬೆಂಬಲ

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ಭಾರಿ ಹಿಡಿತ ಸಾಧಿಸಿದ್ದಾರೆ. ಈಗಾಗಲೇ ‌ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಡಿಕೆಶಿಯೇ ಸ್ವತಃ ಹೊಂದಿಕೊಂಡು ಹೋಗುವ ರಾಜಕಾರಣಕ್ಕೆ ಮನಸ್ಸು ಮಾಡುವಂತೆ ಮಾಡಿರೋ ಸಿದ್ಧರಾಮಯ್ಯನವರು ಈಗ ತಮ್ಮ ರಾಜಕೀಯ ಗುರು ದೇವೇಗೌಡರಿಗೆ (HD Deve Gowda)ಸೆಡ್ಡು ಹೊಡೆದಿದ್ದು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಎರಡನೇ‌ ಅಭ್ಯರ್ಥಿ ಮನ್ಸೂರ್ ಅಲಿಖಾನ್ ರನ್ನು ಕಣದಲ್ಲಿ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯಸಭೆ ಚುನಾವಣೆಗೆ ರಾಜ್ಯದ ಅಭ್ಯರ್ಥಿಗಳ ಆಯ್ಕೆಯಲ್ಲೂ ತಮ್ಮ ಪಾರಮ್ಯ ಮೆರೆದಿದ್ದ ಸಿದ್ಧರಾಮಯ್ಯ ಈಗ ರಾಜ್ಯಸಭೆ ಚುನಾವಣೆಯಲ್ಲೂ ಪಕ್ಷದ‌ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಜೆಡಿಎಸ್ ನಿಂದ ರಾಜ್ಯಸಭೆಗೆ ಆಯ್ಕೆ ಬಯಸಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದರು. ಕುಪೇಂದ್ರ ರೆಡ್ಡಿ ಆಯ್ಕೆಗೆ ಕಾಂಗ್ರೆಸ್‌ ನ ಬೆಂಬಲ ಅನಿವಾರ್ಯವಾಗಿರೋದರಿಂದ ಜೆಡಿಎಸ್ ನಿಯೋಗ ಸಿದ್ಧರಾಮಯ್ಯ ಭೇಟಿ ಮಾಡಿ ಬೆಂಬಲ ಕೋರಿತ್ತು.

ಆದರೆ ಈ ಎಲ್ಲ ಮನವಿಯ ಬಳಿಕವೂ ಸಿದ್ಧರಾಮಯ್ಯ ತಮ್ಮ ಪಟ್ಟು ಸಡಿಲಿಸಿಲ್ಲ. ಹೀಗಾಗಿ ಸಿದ್ಧು ಆದೇಶದಂತೆ ರಾಜ್ಯಸಭೆಯ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ತಮ್ಮ ನಾಮ ಪತ್ರವನ್ನು ಹಿಂಪಡೆದಿಲ್ಲ. ತಮ್ಮ ಎರಡನೇ ಅಭ್ಯರ್ಥಿಯನ್ನು ವಾಪಸ್ ಪಡೆಯದಿರಲು ಕಾಂಗ್ರೆಸ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರೀ ಮುಖಭಂಗವಾಗಿದೆ. ಕೇವಲ ದೇವೇಗೌಡರು ಮಾತ್ರವಲ್ಲ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೂ ಭಾರಿ ನಿರಾಸೆ ಎದುರಾಗಿದೆ.

ಕಾಂಗ್ರೆಸ್ ನ ಎರಡನೇ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಹಾಗೂ ಕುಪ್ಪೇಂದ್ರ ರೆಡ್ಡಿ ಬೆಂಬಲಿಸುವಂತೆ ಕೇಳಿದ್ದ ಮಲ್ಲಿಕಾರ್ಜುನ ಖರ್ಗೆ ಇದಕ್ಕಾಗಿ ಹೈಕಮಾಂಡ್ ಭೇಟಿ‌ ಮಾಡಿದ್ದರು. ದೇವೇಗೌಡರ ಮನವಿ ಮೇರೆಗೆ ಹೈಕಮಾಂಡ್ ಭೇಟಿ ಮಾಡಿದ್ದ ಖರ್ಗೆ ಜೆಡಿಎಸ್ ಗೆ ಬೆಂಬಲ ಕೋರಿದ್ದರು. ಮಾತ್ರವಲ್ಲ ರಾಜ್ಯಸಭೆಗೆ ಆಯ್ಕೆ ಬಯಸಿದ್ದ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಯವರು ಸೋನಿಯಾ ಗಾಂಧಿ ಭೇಟಿ ಮಾಡಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಕಸರತ್ತಿಗೆ ಹೈಕಮಾಂಡಿನಲ್ಲಿ ಬೆಲೆ ಸಿಕ್ಕಿಲ್ಲ. ಎರಡನೇ ಅಭ್ಯರ್ಥಿಯನ್ನು ಉಳಿಸಿಕೊಳ್ಳುವುದು ಅಥವಾ ಜೆಡಿಎಸ್ ನ್ನು‌ ಬೆಂಬಲಿಸುವುದು ಯಾವುದು ಸೂಕ್ತ ಎಂಬುದನ್ನು ನೀವೇ ನಿರ್ಧರಿಸಿ ಎಂದು ಸಿದ್ದರಾಮಯ್ಯ- ಡಿಕೆಶಿಗೆ ವೇಣುಗೋಪಾಲ್ ಫೋನ್ ಮಾಡಿ‌ದ್ದರು ಎನ್ನಲಾಗಿದೆ.

ಹೀಗಾಗಿ ಹೈಕಮಾಂಡ್ ನ ಈ ಆದೇಶವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಂಡು ದೇವೇಗೌಡರಿಗೆ ಮುಖಭಂಗ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಒಂದೆಡೆ ಖರ್ಗೆ ಹಾಗೂ ದೇವೆಗೌಡರಿಗೆ ನಿರಾಸೆಯಾಗಿದ್ದರೇ, ಇನ್ನೊಂದೆಡೆ ಸಿದ್ಧು ಜೆಡಿಎಸ್ ಕಾಂಗ್ರೆಸ್ ಮೈತ್ರಿಯ ಕನಸು ಕಂಡಿದ್ದ ಜೆಡಿಎಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗ್ತಿದೆ. ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮನ್ಸೂರ್ ಅಲಿಖಾನ್ ಗೆ ನಾಮಪತ್ರ ಹಿಂಪಡೆಯದಂತೆ ಸಿದ್ಧು ಸ್ಪಷ್ಟ ಸೂಚನೆ ನೀಡಿದ್ದು ಆ ಮೂಲಕ ಕುಪೇಂದ್ರ ರೆಡ್ಡಿ ರಾಜ್ಯಸಭೆ ಹಾದಿಯ ಕನಸಿಗೆ ಎಳ್ಳುನೀರು ಬಿಡಿಸಿದ್ದಾರೆ.

ಇದನ್ನೂ ಓದಿ : ಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ

ಇದನ್ನೂ ಓದಿ : Congress secret deal : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ : ಏನಿದು ಕಾಂಗ್ರೆಸ್‌ ರಹಸ್ಯ ಒಪ್ಪಂದ

Siddaramaiah vs HD Deve Gowda Rajya Sabha elections

Comments are closed.