Court News : ತರಬೇತಿ ಅವಧಿಯ ಸಿಬ್ಬಂದಿ ಖಾಯಂ ನೌಕರನಲ್ಲ : ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ವಜಾಗೊಂಡಿರುವ ಸಿಬ್ಬಂದಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ತರಬೇತಿ ಅವಧಿಯ ಸಿಬ್ಬಂದಿ ಯನ್ನು ಕೈಗಾರಿಕಾ ಕಾಯ್ದೆಯ ಪ್ರಕಾರ ಯಾವುದೇ ಸಂಸ್ಥೆಯ ಖಾಯಂ ನೌಕರ ಎಂದು ಪರಿಗಣಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತರಬೇತಿ ಅವಧಿಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಯನ್ನು ವಜಾಗೊಳಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಈ ಕುರಿತ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿದೆ.

2001ರಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಸುಮಾರು 14 ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪದ ಹಿನ್ನೆಲೆಯಲ್ಲಿ ತರಬೇತಿ ಅವಧಿ ಸಿಬ್ಬಂದಿಯೊಬ್ಬರನ್ನು ವಜಾ ಗೊಳಿಸಿತ್ತು. ಈ ಕುರಿತು ಬಾಕಿ ವೇತನದ ಜೊತೆಗೆ ಅವರನ್ನು ಸೇವೆಗೆ ಮರಳಿ ಸೇರಿಸಿಕೊಳ್ಳಲು ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ, ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ಎತ್ತಿ ಹಿಡಿದಿತ್ತು.

ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಸಂದರ್ಭದಲ್ಲಿ 240 ದಿನಗಳನ್ನು ಪೂರೈಸಿದ್ದರೂ ತರಬೇತಿ ಅವಧಿಯ ಸಿಬ್ಬಂದಿ ಎಂದೇ ಹೇಳಲಾಗುತ್ತಿದೆ. ಖಾಯಂ ನೌಕರ ಎಂದು ಪರಿಗಣಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. ಪ್ರಯಾಣಿಕರಿಗೆ ಟಿಕೆಟ್ ವಿತರಿಸದ ಇದೇ ರೀತಿಯ 32 ಪ್ರಕರಣಗಳು ಅರ್ಜಿದಾರರ ವಿರುದ್ಧ ದಾಖಲಾಗಿವೆ ಎಂದು ನಿಗಮ ಆಕ್ಷೇಪ ಸಲ್ಲಿಸಿತ್ತು.

ಆರಂಭದಲ್ಲಿ ತರಬೇತಿ ಅವಧಿಯ ಅವಕಾಶ ನೀಡಿ ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದರೆ ಮಾತ್ರವೇ ಅಂತಹ ನೌಕರರು ಖಾಯಂ ನೌಕರರು ಎಂದು ಪರಿಗಣಿಸಲಾಗುತ್ತದೆ. ಆದರೆ ಅಲ್ಲಿಯ ವರೆಗೆ ಖಾಯಂ ನೌಕರ ಆಗಿರುವುದಿಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಹೇಳಿದೆ.

ಇದನ್ನೂ ಓದಿ : Mysore : ಮೈಸೂರಿನ ಜನರನ್ನ ಬೆಚ್ಚಿ ಬೀಳಿಸಿದೆ  ಗ್ಯಾಂಗ್‌ ರೇಪ್‌ ಪ್ರಕರಣ

ಇದನ್ನೂ ಓದಿ : Nandi Hills : ಪ್ರವಾಸಿಗರಿಗೆ ಬಿಗ್‌ಶಾಕ್‌ : ನಂದಿ ಬೆಟ್ಟಕ್ಕೆ 20 ದಿನ ಪ್ರವೇಶ ಬಂದ್

(Training period staff is not a permanent employee: High Court)

Comments are closed.