ಮಂಗಳೂರು ಶಾಸಕ ಯು.ಟಿ.ಖಾದರ್ ನೂತನ ಸ್ಪೀಕರ್

ಬೆಂಗಳೂರು : ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್‌ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು.ಟಿ ಖಾದರ್‌ (UT Khader Speaker) ಅವರನ್ನು ಕಾಂಗ್ರೆಸ್‌ ಸರಕಾರ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. ಸ್ಪೀಕರ್‌ ಸ್ಥಾನಕ್ಕೆ ಆರ್‌. ವಿ ದೇಶಪಾಂಡೆ, ಟಿ ವಿ ಜಯಚಂದ್ರ ಹಾಗೂ ಎಚ್‌.ಕೆ. ಪಾಟೀಲ್‌ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಇದೀಗ ಕೊನೆ ಘಳಿಗೆಯಲ್ಲಿ ಯು ಟಿ ಖಾದರ್‌ ಅವರನ್ನು ವಿಧಾನಸಭೆಯ ಸ್ಪೀಕರ್‌ ಹುದ್ದೆಗೆ ಕಾಂಗ್ರೆಸ್‌ ಸರಕಾರ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಅವರು ಖಾದರ್‌ ಅವರನ್ನು ಕರೆದು ಮಾತನಾಡಿದ್ದು ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ನೀಡಬೇಕು ಎಂದು ರಾಹುಲ್‌ ಗಾಂಧಿ ತೀರ್ಮಾನಿಸಿದ್ದಾರೆ. ಹಾಗಾಗಿ ಸ್ಪೀಕರ್‌ರಂತಹ ಪ್ರತಿಷ್ಠಿತ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆಗೆ ನೀವೇ ಸೂಕ್ತ ಎಂದು ಪಕ್ಷ ತೀರ್ಮಾನಿಸಿದೆ. ನೀವು ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ಖಾದರ್‌ ಒಪ್ಪಿಗೆ ಸೂಚಿಸಿದ್ದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್‌ ಅವರ ಜೊತರಗೂ ಖಾದರ್‌ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

ಮಂಗಳವಾರ 11.30 ಕ್ಕೆ ಯು ಟಿ ಖಾದರ್‌ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ನಾಮಪತ್ರ ಸಹು ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಎರಡು ವರ್ಷಗಳ ಬಳಿಕ ಸಂಪುಟ ಪುನಾರಚನೆಯಲ್ಲಿ ಖಾದರ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಪಕ್ಷ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರ ನೇಮಕ

ಮಂಗಳೂರು ಕ್ಷೇತ್ರದಿಂದ ಸತತ ಐದು ಬಾರಿ ಗೆಲುವು ಸಾಧಿಸಿ ಈ ಬಾರಿ ವಿಧಾನಸಬೆ ಪ್ರವೇಶಿಸಿದ್ದಾರೆ. ಅವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಆರೋಗ್ಯ, ಆಹಾರ ಹಾಗೂ ಕುಮಾರಸ್ವಾಮಿ ಸರಕಾರದಲ್ಲಿ ವಸತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು.

UT Khader Speaker: Mangalore MLA UT Khader is the new speaker

Comments are closed.