HP Company : 3 ವರ್ಷಗಳಲ್ಲಿ 6000 ಉದ್ಯೋಗಿಗಳ ವಜಾಕ್ಕೆ ಮುಂದಾದ ಎಚ್‌ಪಿ ಕಂಪೆನಿ

ನವದೆಹಲಿ : ವಿಶ್ವದ ಪ್ರಮುಖ ಟೆಕ್ ಕಂಪನಿಗಳು ಉದ್ಯೋಗ ಕಡಿತವನ್ನು ಘೋಷಿಸಿದ ನಂತರ , ಇದೀಗ ಅಮೇರಿಕದ ತಂತ್ರಜ್ಞಾನ ಕಂಪನಿ ಎಚ್‌ಪಿ (HP Company) ಎಂದೇ ಪ್ರಖ್ಯಾತಿ ಪಡೆದಿರುವ ಅಮೇರಿಕದ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ ಮುಂದಿನ ಮೂರು ವರ್ಷಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಮಂಗಳವಾರ ಪ್ರಕಟಿಸಿದೆ.

ತ್ರೈಮಾಸಿಕ ಫಲಿತಾಂಶ ನೀರಸವಾಗಿ ಕಂಡು ಬಂದ ಬೆನ್ನಲ್ಲೇ ಎಚ್‌ಪಿ ಉದ್ಯೋಗ ಕಡಿತದ ನಿರ್ಧಾರ ಪ್ರಕಟಿಸಿದೆ. ಆರ್ಥಿಕತೆಯಲ್ಲಿ ಅಸ್ಥಿರತೆಯ ಕಾರಣದಿಂದಾಗಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಅದರ ಮಾರಾಟದ ಪ್ರಮಾಣದಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ ಎಂದು ಎಚ್‌ಪಿ ಹೇಳಿದೆ. ಒಟ್ಟಾರೆ ಕಂಪೆನಿಯು ಜಾಗತಿಕವಾಗಿ ಮುಂದಿನ ಮೂರು ವರ್ಷಗಳಲ್ಲಿ 4,000 ದಿಂದ 6,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಕಂಪೆನಿ ಮಾಹಿತಿ ನೀಡಿದೆ. 2025ನೇ ಹಣಕಾಸು ವರ್ಷದ ವೇಳೆಗೆ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಮುಕ್ತಾಯಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಎಚ್‌ಪಿ ಕಂಪೆನಿ ಪ್ರಪಂಚಾದ್ಯಂತ ಸುಮಾರು 51,000 ಉದ್ಯೋಗಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಭವಿಷ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ದೀರ್ಘಾವಧಿಗೆ ಕಂಪೆನಿಯ ಮೌಲ್ಯ ಉಳಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವದಕ್ಕಾಗಿ ವೆಚ್ಚದಲ್ಲಿ ಕಡಿತ ಮಾಡಬೇಕಿದೆ. ಜೊತೆಗೆ ನಮ್ಮ ಉದ್ಯಮದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ಷೇತ್ರಗಳಲ್ಲಿ ಮುರುಹೂಡಿಕೆ ಮಾಡಬೇಕಿದೆ ಎಂದು ಎಚ್‌ಪ ಅಧ್ಯಕ್ಷ ಮತ್ತು ಸಿಇಓ ಎನ್ರಿಕ್‌ ಲೋರೆಸ್‌ ಹೇಳಿಕೆ ನೀಡಿದ್ದಾರೆ.

ಎಚ್‌ಪಿ ಕೂಡ ಉದ್ಯೋಗ ಕಡಿತ ಘೋಷಿಸುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಟೆಕ್‌ ಕಂಪೆನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿರುತ್ತದೆ. ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಸದ್ಯದಲ್ಲೇ ಹತ್ತು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮಂಗಳವಾರ ವರದಿಯಾಗಿದೆ. ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದಕ್ಕಾಗಿ ಕಂಪೆನಿ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗುತ್ತಿದೆ. ಕಳಪೆ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಲು ಗೂಗಲ್‌ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ.ಕಂಪೆನಿಯು ಒಟ್ಟು ಉದ್ಯೋಗಿಗಳ ಶೇಕಡಾ 6ರಷ್ಟು ಮಂದಿಯನ್ನು ವಜಾಗೊಳಿಸಲು ಅಲ್ಫಾಬೆಟ್‌ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಇದನ್ನೂ ಓದಿ : 0nline Gaming: ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ದರ ಏರಿಕೆ ಬಿಸಿ?; ಶೇ.28ರಷ್ಟು GST ವಿಧಿಸುವಂತೆ ಸಮಿತಿ ಶಿಫಾರಸ್ಸು ಸಾಧ್ಯತೆ

ಇದನ್ನೂ ಓದಿ : Twitter Alternatives : ಟ್ವಿಟರ್‌ಗೆ ಪರ್ಯಾಯವಾಗಿ ಭಾರತದಲ್ಲಿ ನೀವು ಬಳಸಬಹುದಾದ 5 ಮೈಕ್ರೋಬ್ಲಾಗಿಂಗ್‌ ಆಪ್‌ಗಳು

ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್‌, ಮೆಟಾ, ಟ್ವಿಟರ್‌, ಅಮೆಜಾನ್‌ ಇತ್ತೀಚೆಗೆ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಘೋಷಿಸಿದ್ದವು. ಮೆಟಾ ಕಂಪೆನಿ ಸುಮಾರು ಹನ್ನೊಂದು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತು. ಮೈಕ್ರೋಸಾಫ್ಟ್‌ ಸುಮಾರು ಒಂದು ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ . ಟ್ವಿಟರ್‌ ಮೂರು ಸಾವಿರದ ಐನೂರು ಮಂದಿಯನ್ನು ಕೆಲಸದಿಂದ ಮನೆಗೆ ಕಳುಸಿದೆ. ಇತ್ತೀಚೆಗೆ ಅಮೆಜಾನ್‌ ಕೂಡ 2023ರಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಮುಂದುವರೆಸುವುದಾಗಿ  ಹೇಳಿದೆ.

HP company to lay off 6000 employees in 3 years

Comments are closed.