ಭಾರತಕ್ಕೆ ಬರಲು ಸಜ್ಜಾದ ವಿವೋ X300 ಅಲ್ಟ್ರಾ ಮತ್ತು X300 FE : 200 MP ಕ್ಯಾಮೆರಾ ವೈಶಿಷ್ಟ್ಯದ ಫೋನ್ ಬೆಲೆ ಎಷ್ಟು?
ವಿವೋ X300 ಅಲ್ಟ್ರಾ ಮತ್ತು X300 FE ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬರಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ನಾಳೆ (ಮೇ 6 ರಂದು) ಬಿಡುಗಡೆಯಾಗಲಿರುವ ಈ ಎರಡೂ ಫೋನ್‌ಗಳ ವೈಶಿಷ್ಟ್ಯವೇನು?
ಮಾರ್ಚ್ ತಿಂಗಳ ಆರಂಭದಲ್ಲಿ MWC ಬಾರ್ಸಿಲೋನಾ 2026 ಕಾರ್ಯಕ್ರಮದಲ್ಲಿ ವಿವೋ ತನ್ನ ನೆಕ್ಸ್ಟ್ ಜನರೇಷನ್ ಕ್ಯಾಮೆರಾ ಫ್ಲಾಗ್‌ಶಿಪ್ ವಿವೋ X300 ಅಲ್ಟ್ರಾವನ್ನು ಮೊಟ್ಟ ಮೊದಲಬಾರಿಗೆ ಪ್ರದರ್ಶಿಸಿತ್ತು. 200 ಮೆಗಾಪಿಕ್ಸಲ್‌ನ ಎರಡು ಎಕ್ಸ್‌ಟರ್ನಲ್ ಝೈಸ್ ಟೆಲಿಫೋಟೋ ಲೆನ್ಸ್‌ಗಳಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಪರಿಚಯಿಸಲಾಗಿತ್ತು. ಆ ಸಮಯದಲ್ಲಿ ಚೀನಾದಿಂದ ಹೊರಗೆ ಬಿಡುಗಡೆಯಾಗುವ ಮೊದಲ ಅಲ್ಟ್ರಾ ಮಾದರಿಯ ಫೋನ್ ಎಂದು ಸೂಚಿಸಲಾಗಿತ್ತು. ಈಗ ಅದಕ್ಕೆ ಕಾಲಾವಕಾಶ ಕೂಡಿಬಂದಿದೆ. ವಿವೋ ಇದೇ ಮೇ 6 ರಂದು ವಿವೋ X300 ಅಲ್ಟ್ರಾ ಮತ್ತು X300 ಎಫ್‌ಇ ಯನ್ನು ಭಾರತದ ಜನತೆಗೆ ಪರಿಚಯಿಸಲಿದೆ. ಕಂಪನಿಯು ಈಗಾಗಲೇ ಇದರ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಕಟಣೆಯನ್ನು ಪ್ರಾರಂಭಿಸಿದೆ. ಇ–ಕಾಮರ್ಸ್ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿರುತ್ತದೆ ಎಂಬುದು ಜಾಹಿರಾತಿನಿಂದ ತಿಳೀದುಬರುತ್ತಿದೆ. ನಾಳೆ ಬಿಡುಗಡೆ ಸಜ್ಜಾಗಿರುವ ಈ ಫೋನಿನ ವೈಶಿಷ್ಟ್ಯಗಳೇನು? ಎಂದು ನೋಡೋಣ
ವಿವೋ X300 ಅಲ್ಟ್ರಾ ವೈಶಿಷ್ಟ್ಯ
ವಿವೋ X300 ಅಲ್ಟ್ರಾ 120Hz ದರದೊಂದಿಗೆ 6.28 ಇಂಚಿನ LTPO OLED ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್‌ನಿಂದ ಚಲಿಸುತ್ತದೆ. ಇದನ್ನು 16GB ಯ RAM ಮತ್ತು 1TB ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇನ್ನು ಇದು ಆಂಡ್ರಾಯ್ಡ್ 16 ಆಧಾರಿತ ವಿವೋನ ಇತ್ತೀಚಿನ ಒರಿಜಿನ್ ಒಎಸ್ 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು 5 ವರ್ಷಗಳವರೆಗೆ ಒಎಸ್ ನವೀಕರಣವನ್ನು ಸ್ವೀಕರಿಸಲಿದೆ.
ಈ ಫೋನ್‌ನ ಅತಿದೊಡ್ಡ ಸಾಮರ್ಥ್ಯವೆಂದರೆ ಅದು ಕ್ಯಾಮೆರಾ. 200MP ಪ್ರಾಥಮಿಕ ಸಂವೇದಕ, 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೇರಿದಂತೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಕ್ಯಾಮೆರಾ ವ್ಯವಸ್ಥೆಯು ZEISS ಬ್ರ್ಯಾಂಡಿಂಗ್ ಅನ್ನು ಹೊಂದಿರುತ್ತದೆ ಮತ್ತು ಡಾಲ್ಬಿ ವಿಷನ್‌ನೊಂದಿಗೆ 120fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಈ ಫೋನ್ ನಲ್ಲಿ 50MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದು. ಇನ್ನೊಂದು ವೈಶಿಷ್ಟ್ಯವೆಂದರೆ ಈಗ ಬಿಡುಗಡೆಯಾಗಲಿರುವ ವಿವೋನ ಈ ಎರಡೂ ಫೋನ್‌ಗಳಲ್ಲಿ ಪ್ರತ್ಯೇಕವಾಗಿ ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್ ಅನ್ನು ನೀಡಲಾಗುತ್ತದೆ.
ಇನ್ನು ವಿವೋ X300 ಅಲ್ಟ್ರಾದ ಬ್ಯಾಟರಿಯ ಬಗ್ಗೆ ಹೇಳುವುದಾದರೆ 6,600mAh ಬ್ಯಾಟರಿ, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಈ ಸಾಧನವು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಬರುತ್ತದೆ. ಈ ಫೋನ್ ಎಕ್ಲಿಪ್ಸ್ ಬ್ಲಾಕ್ ಮತ್ತು ವಿಕ್ಟರಿ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ವಿವೋ X300 FE ವೈಶಿಷ್ಟ್ಯ
ವಿವೋ X300 FE ಪೋನ್ 6.31-ಇಂಚಿನ 1.5K LTPO AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 5 ಪ್ರೊಸೆಸರ್‌ನಿಂದ ಚಲಿಸುತ್ತದೆ. ಇದನ್ನು LPDDR5x RAM ಮತ್ತು UFS 4.1 ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಕ್ಯಾಮೆರಾಗಳ ವಿಷಯದಲ್ಲಿ, ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಸೆಟಪ್‌ನೊಂದಿಗೆ ಬಿಡುಗಡೆಯಾಗಲು ಸಜ್ಜಾಗಿದೆ. ಇದರಲ್ಲಿ OIS ಹೊಂದಿರುವ 50MP ಸೋನಿ IMX921 ಪ್ರಾಥಮಿಕ ಸಂವೇದಕ, 3x ಆಪ್ಟಿಕಲ್ ಜೂಮ್ ನೀಡುವ 50MP ಸೋನಿ IMX882 ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೇರಿವೆ. ಮುಂಭಾಗದಲ್ಲಿ, ಇದು 90-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 50MP ಸೆಲ್ಫಿ ಶೂಟರ್ ಅನ್ನು ಹೊಂದಿದೆ.
ಈ ಫೋನ್ 6,500mAh ಬ್ಯಾಟರಿ ಬೆಂಬಲಿಸುತ್ತದೆ. ಇದನ್ನು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬಳಸಿ ಚಾರ್ಜ್ ಮಾಡಬಹುದಾಗಿದೆ. ಈ ಫೋನ್ ಭಾರತದ ಗ್ರಾಹಕರಿಗೆ ವಿಶೇಷವಾದ ಅರ್ಬನ್ ಆಲಿವ್ ಬಣ್ಣದಲ್ಲಿ ಲಭ್ಯವಿರುತ್ತದೆ. ಜೊತೆಗೆ ನಾಯ್ರ್ ಬ್ಲಾಕ್ ಮತ್ತು ಲಿಲಾಕ್ ಪರ್ಪಲ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ವಾಟ್ಸಪ್ ರೀಚಾರ್ಜ್ ಫೀಚರ್: ಸೆಕೆಂಡ್‌ಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಸೌಲಭ್ಯ!
ಬೆಲೆ ಎಷ್ಟು?
ವಿವೋ ಎಕ್ಸ್ 300 ಅಲ್ಟ್ರಾದ ಬೆಲೆ 1,99,999 ರೂ.ಗಳಾಗಿದೆ. 16 ಜಿಬಿ RAM ಮತ್ತು 512 ಜಿಬಿ ಸ್ಟೋರೇಜ್ ರೂಪಾಂತರದ ನಿರೀಕ್ಷಿತ ಬೆಲೆ ಸುಮಾರು 1,59,999 ರೂ.ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅದೇ ರೀತಿ ವಿವೋ X300 FE ಫೋನಿನ ಬೆಲೆ 1,19,999 ರೂ.ಗಳಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ, ಆದರೂ ಇದರ ನಿರೀಕ್ಷಿತ ಬಿಡುಗಡೆ ಬೆಲೆ 12GB RAM ಮತ್ತು 256GB ಸ್ಟೋರೇಜ್ ಮಾದರಿಗೆ 79,999 ರೂ.ಗಳಿಗೆ ಹತ್ತಿರವಾಗಬಹುದು ಎಂಬ ನಿರೀಕ್ಷೆಯೂ ಇದೆ.



