Whatsapp new feature: ಇನ್ಮುಂದೆ ವಾಟ್ಸಪ್ ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡ್ಕೊಳಿ; ಸ್ಟೇಟಸ್ ನಲ್ಲಿ ವಾಯ್ಸ್ ಮೆಸೇಜ್ ಕೂಡಾ ಹಾಕ್ಕೊಳಿ..

ನವದೆಹಲಿ: Whatsapp new feature: ಕೆಲವೊಂದು ಅಗತ್ಯ ವಿಷಯಗಳನ್ನು ವಾಟ್ಸಪ್ ನಲ್ಲಿ ಇಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತೆ. ಆಗ ಜನರು ಒಂದೋ ತಮ್ಮ ತೀರಾ ಆಪ್ತರ ಜೊತೆ ಗ್ರೂಪ್ ಕ್ರಿಯೇಟ್ ಮಾಡುತ್ತಾರೆ. ಅಥವಾ ತಮ್ಮದೇ ಆದ ಬೇರೆ ನಂಬರ್ ನಲ್ಲಿ ವಾಟ್ಸಪ್ ಖಾತೆ ತೆರೆದು ಆ ನಂಬರ್ ಗೆ ಅಗತ್ಯ ದಾಖಲೆಗಳನ್ನು ಕಳುಹಿಸಿ ಬಿಡ್ತಾರೆ. ಆದರೆ ಇನ್ಮುಂದೆ ಈ ಎಲ್ಲಾ ಸರ್ಕಸ್ ಮಾಡಬೇಕಾದ ಪ್ರಸಂಗ ಇರಲ್ಲ. ಯಾಕಂದ್ರೆ ವಾಟ್ಸಪ್ ನಲ್ಲಿ ಇನ್ಮೇಲೆ ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳುವಂತೆ ಹೊಸ ಫೀಚರ್ ಒಂದನ್ನು ಪರಿಚಯಿಸಲಾಗಿದೆ.

ವಾಟ್ಸಪ್ ತನ್ನ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ವಾಟ್ಸಪ್ ನಲ್ಲಿ ತಮ್ಮ ನಂಬರ್ ಗೆ ತಾವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪೆನಿ ಪರಿಚಯಿಸಿದೆ. ಸದ್ಯಕ್ಕೆ ಆಯ್ದ ಬಳಕೆದಾರರಿಗೆ ಮಾತ್ರ ಈ ಆಯ್ಕೆ ಲಭ್ಯವಿದ್ದು, ಮುಂದಿನ ವಾರದಿಂದ ಎಲ್ಲಾ ಆಂಡ್ರಾಯ್ಡ್ ಹಾಗೂ ಐಒಎಸ್ ವಾಟ್ಸಪ್ ಬಳಕೆದಾರರಿಗೆ ಈ ಫೀಚರ್ ಸಿಗಲಿದೆಯಂತೆ.

ಇದನ್ನೂ ಓದಿ: ASUS ROG Phone 6 Series : ಈಗ ಭಾರತದಲ್ಲೂ ಲಭ್ಯ ಆಸಸ್‌ ROG ಫೋನ್‌ 6 ಮತ್ತು ROG ಫೋನ್‌ 6 ಪ್ರೋ; ಬೆಲೆ ಮತ್ತು ವೈಶಿಷ್ಟ್ಯ

ವಾಟ್ಸಪ್ ನ ಹೊಸದಾಗಿ ಪರಿಚಯಗೊಂಡ ಮೆಸೇಜ್ ವಿತ್ ಯುವರ್ ಸೆಲ್ಫ್ ಎಂಬ ಫೀಚರ್ ಬಳಕೆದಾರರ ಕಾಂಟೆಕ್ಟ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ. ವಾಟ್ಸಪ್ ಖಾತೆ ತೆರದು ನ್ಯೂ ಚಾಟ್ ನಲ್ಲಿ ಕಾಂಟೆಕ್ಟ್ ಲಿಸ್ಟ್ ತೆರೆದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು, ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳಬಹುದಾಗಿದೆ. ಎಲ್ಲರಿಗೂ ಮೆಸೇಜ್ ಮಾಡುವಾಗ ಸಿಗುವ ಎಲ್ಲಾ ರೀತಿಯ ಆಯ್ಕೆಗಳು ಈ ಚಾಟ್ ಬಾಕ್ಸ್ ನಲ್ಲೂ ಸಿಗಲಿವೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲಾ ರೀತಿಯ ಫೈಲ್ ಗಳನ್ನು ನಮಗೆ ನಾವೇ ಕಳುಹಿಸಿಕೊಳ್ಳಬಹುದಾಗಿದೆ. ಈ ಮೂಲಕ ಅಗತ್ಯ ದಾಖಲೆಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬಹುದಾಗಿದೆ.

ಈವರೆಗೆ ವಾಟ್ಸಪ್ ಸ್ಟೇಟಸ್ ನಲ್ಲಿ ಫೋಟೋ, ವಿಡಿಯೋ ಅಷ್ಟೆ ಅಪ್ ಲೋಡ್ ಮಾಡಬಹುದಾಗಿತ್ತು. ಆದರೆ ಇನ್ಮುಂದೆ ವಾಯ್ಸ್ ಮೆಸೇಜ್ ಕೂಡಾ ಸ್ಟೇಟಸ್ ನಲ್ಲಿ ಹಾಕುವ ಫೀಚರ್ ಮೊದಲಿಗೆ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ. ವಾಯ್ಸ್ ಮೆಸೇಜ್ ಗೆ 30 ಸೆಕೆಂಡ್ ಗಳ ಕಾಲ ನೀಡಲಾಗಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೋಫೋನ್ ಆಯ್ಕೆ ನೀಡಲಾಗಿದೆ. ಮೈಕ್ರೋಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಕೇವಲ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ: Covid vaccine death: ಕೋವಿಡ್ ಲಸಿಕೆಯಿಂದ ಆಗುವ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರ ಸ್ಪಷ್ಟನೆ

ಇನ್ನು ಡೆಸ್ಕ್ ಟಾಪ್ ನಲ್ಲಿ ವಾಟ್ಸಪ್ ಬಳಕೆ ಮಾಡುವವರಿಗೆ ಸದ್ಯದಲ್ಲೇ ಸ್ಕ್ರೀನ್ ಲಾಕ್ ಎಂಬ ಹೊಸ ಆಯ್ಕೆ ನೀಡುವುದಾಗಿಯೂ ಮೆಟಾ ಘೋಷಿಸಿದೆ. ವಾಟ್ಸಪ್ ಮೊದಲಿನಿಂದಲೂ ಬಳಕೆದಾರರ ಖಾಸಗಿ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇದೀಗ ವಾಟ್ಸಪ್ ಡೇಟಾ ಲೀಕ್ ಆಗಿದೆ ಎಂಬ ಸುದ್ದಿ ಹಿನ್ನೆಲೆ ಬಳಕೆದಾರರ ದಾಖಲೆಗಳ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸಪ್ ವೆಬ್ ನಲ್ಲಿ ಬರುವ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ ನಲ್ಲಿ ಪ್ರತಿ ಬಾರಿ ವಾಟ್ಸಪ್ ಓಪನ್ ಮಾಡುವಾಗಲೂ ಪಾಸ್ ವರ್ಡ್ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ ಟಾಪ್ ನಲ್ಲಿ ವಾಟ್ಸಪ್ ಬಳಸದಿದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಈ ಫೀಚರ್ ರಕ್ಷಣೆ ನೀಡಲಿದೆ. ಹಾಗಂತ ಇದು ಕಡ್ಡಾಯವಲ್ಲವಂತೆ. ಬಳಕೆದಾರರು ಈ ಸ್ಕ್ರೀನ್ ಲಾಕ್ ಫೀಚರ್ ಅನ್ನು ಬೇಕಾದಾಗ ಮಾತ್ರ ಉಪಯೋಗಿಸಬಹುದಾಗಿದೆ.

Whatsapp new feature: Meta introduced new features to whatsapp users details are here

Comments are closed.