Kodachadri : ಕೊಡಚಾದ್ರಿಯ ಅದ್ಬುತ ಪ್ರಕೃತಿ ಸೌಂದರ್ಯ ಒಮ್ಮೆಯಾದ್ರೂ ನೋಡಲೇ ಬೇಕು

ಸುತ್ತ ಮುತ್ತ ಸಹ್ಯಾದ್ರಿಯ ವಿಶಿಷ್ಟ ನಿತ್ಯ ಹರಿದ್ವರ್ಣ ಕಾಡು. ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಮಳೆಕಾಡು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದೆ ಎಂದರೂ ತಪ್ಪಾಗದು. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ, ನಾಲ್ಕೂದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ. ಕೊಡಚಾದ್ರಿಯ ಸೂರ್ಯಾಸ್ತ ಅಪರೂಪದ್ದು. ಅದರಲ್ಲೂ ಸಮುದ್ರದಲ್ಲಿ, ಚಿನ್ನದ ಬಣ್ಣದ ಸೂರ್ಯ ಮುಳುಗುವಾಗ ಎಂತವರಿಗಾದರು ಸ್ವರ್ಗ ಕಣ್ಣ ಮುಂದೆ ಬಂದಂತೆ ಭಾಸ ವಾಗುತ್ತದೆ.

ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು 1343 ಮೀ. ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ ಕೊಡಚಾದ್ರಿ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂದು ಪ್ರತೀತಿ. ಸರ್ವಜ್ಞ ಪೀಠಕ್ಕಿಂತ 2 ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ.

ಇದನ್ನೂ ಓದಿ: Varanga Kere Basadi : ವರಂಗದ ಕೆರೆ ಬಸದಿ ಪ್ರವಾಸಿಗರ ರಮ್ಯ ತಾಣ

ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆ ಹೋಗುತ್ತಿದ್ದರು. ಇಲ್ಲಿಗೆ ಸಮೀಪದ ನಗರ ಹತ್ತಿರದ ನಿಲಸಕಲ್ಲು ಎಂಬಲ್ಲಿ ನವ ಶಿಲಾಯುಗದ ಕಾಲದ ನಿಲುವುಗಲ್ಲುಗಳ ಸಾಲುಗಳನ್ನು ಗಮನಿಸಿದರೆ, ಈ ಸುತ್ತಲಿನ ಪ್ರದೇಶದಲ್ಲಿ ಕನಿಷ್ಟ ಮೂರು ಸಾವಿರ ವರುಷಗಳಿಂದ ಜನವಸತಿ ಇರಬೇಕು ಎನಿಸುತ್ತದೆ. ಕೊಡಚಾದ್ರಿಯಲ್ಲಿ ಪುರಾತನ ಜನವಸತಿ ಇದ್ದ ಕುರುಹು ಇನ್ನೂ ಪತ್ತೆಯಾಗಿಲ್ಲವಾದರೂ, ಕ್ರಿ.ಶ.ಏಳನೆಯ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಭೇಟಿ ಕೊಟ್ಟಿದ್ದರು ಎನ್ನಲಾಗಿದೆ.

ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಟೆ ಮಾಡಿದರು ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಶಿಖರದ ಹತ್ತಿರವಿರುವ ಮೂಲ ಮೂಕಾಂಬಿಕ ದೇವಾಲಯವೂ ಸಹ ಸಾಕಷ್ಟು ಪುರಾತನವಾದದ್ದು. ಈ ದೇವಾಲಯದ ಬಳಿ ಇರುವ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವು, ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎನ್ನುತ್ತಾರೆ ಸ್ಥಳೀಯರು. ಇದು ಪುರಾತನ ವಿಧಾನಗಳಿಂದ ತಯಾರಾದ ಕಬ್ಬಿಣ ಎಂದು ಸಂಶೋಧನೆಗಳಿಂದ ಪತ್ತೆಯಾಗಿದೆ.

ಇದನ್ನೂ ಓದಿ: Agumbe Ghat : ಕರ್ನಾಟಕದ ಚಿರಾಪುಂಜಿ ಆಗುಂಬೆ ಘಾಟ್‌ ಜೀವ ವೈವಿದ್ಯತೆಯ ತಾಣ

(Kodachadri’s amazing natural beauty must be seen at least once)

Comments are closed.