Koodlu Falls : ಚಾರಣಪ್ರಿಯರ ನೆಚ್ಚಿನ ತಾಣ ಕೂಡ್ಲು ತೀರ್ಥ ಜಲಪಾತ

ಹಚ್ಚ ಹಸಿರಿನ ವನರಾಶಿ. ದಟ್ಟ ಕಾನನದೊಳಗೆ ಝುಳು ಝುಳು ನಾದ. ಧುಮ್ಮಿಕ್ಕಿ ಹರಿಯೋ ಜಲರಾಶಿಯ ಸೊಬಗು. ಹಾದಿಯುದ್ದಕ್ಕೂ ತಣ್ಣನೆಯ ವಾತಾವರಣ. ಚಾರಣದ ಹಾರಿಯುದ್ದಕ್ಕೂ ಹಕ್ಕಿಗಳ ನಿನಾದ. ಹೌದು, ಆಗುಂಬೆಯ ಮಡಿಲಲ್ಲಿರೋ ಕೂಡ್ಲು ತೀರ್ಥ ಜಲಪಾಲ ಪ್ರವಾಸಿಗರ ನೆಚ್ಚಿನ ತಾಣ.

ಹೆಬ್ರಿಯಿ೦ದ 20 ಕಿ.ಮೀ. ದೂರದಲ್ಲಿರುವ ಸುಂದರ ಜಲಪಾತವೇ ಕೂಡ್ಲು ತೀರ್ಥ ಜಲಪಾತ. ಆಗುಂಬೆಯ ದಟ್ಟ ಕಾಡಿನ ಮಧ್ಯ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಇದನ್ನು ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಲು ಮನಸಾಗುವ ಸ್ವರ್ಗ ಈ ಕೂಡ್ಲು ತೀರ್ಥ.

ಇದನ್ನೂ ಓದಿ: Varanga Kere Basadi : ವರಂಗದ ಕೆರೆ ಬಸದಿ ಪ್ರವಾಸಿಗರ ರಮ್ಯ ತಾಣ

ಸೀತಾ ನದಿಯು ಹುಟ್ಟಿದ ಜಾಗವೇ ಕೂಡ್ಲು ತೀರ್ಥ. ಈ ಜಲಪಾತ ರಸ್ತೆ ಸ೦ಪರ್ಕದಿ೦ದ 4 ಕಿ.ಮೀ. ದೂರದಲ್ಲಿದೆ. ಹೀಗಾಗಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿರುವ ಈ ಜಲಪಾತಕ್ಕೆ ತೆರಳಬೇಕಾದ್ರೆ 4 ಕಿ.ಮೀ. ನಡೆದುಕೊಂಡೇ ಸಾಗಬೇಕು. ನಡಿಗೆಯ ಹಾದಿಯುದ್ದಕ್ಕೂ ಅದ್ಬುತ ಅನುಭವ ನಿಮ್ಮದಾಗುತ್ತೆ. ಅದ್ರಲ್ಲೂ ಕೂಡ್ಲು ಪ್ರವೇಶಿಸುತ್ತಲೇ, ರಮ್ಯ ಮನೋಹರ ಜಲಪಾತವು ಎದುರುಗೊಳ್ಳುತ್ತದೆ. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ತುಂಬ ಮುದ ನೀಡುತ್ತದೆ.

ದಟ್ಟ ಕಾಡಿನ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕುವ ಸೀತಾ ನದಿಯನ್ನು ನೋಡಿದರೆ ಯಾರಿಗಾದರು ಅಲ್ಲೇ ಇದ್ದು ಬಿಡಲು ಮನಸ್ಸಾಗುತದೆ. ಆ ರಮಣೀಯತೆಯ, ಆ ಭೋರ್ಗರೆಯುತ್ತ ಬೀಳುವ ದೃಶ್ಯ ನಿಜಕ್ಕೂ ನಡೆದು ಬಂದ ದಣಿವೆಲ್ಲವನ್ನೂ ಇಂಗಿಸಿಬಿಡುತ್ತದೆ.

ಇದನ್ನೂ ಓದಿ: Agumbe Ghat : ಕರ್ನಾಟಕದ ಚಿರಾಪುಂಜಿ ಆಗುಂಬೆ ಘಾಟ್‌ ಜೀವ ವೈವಿದ್ಯತೆಯ ತಾಣ

ಗಗನದಿಂದ ಭುವಿಯತ್ತ ಒಮ್ಮೆಲೆಯೇ ಹೆಬ್ಬಂಡೆಗಳನ್ನು ಸೀಳಿಕೊಂಡು ದೊಪ್ಪೆಂದು ಧುಮ್ಮಿಕ್ಕುವ ಸೀತಾ ನದಿಯ ಕೂಡ್ಲು ತೀರ್ಥದ ಪರಿಸರ ನೋಡುಗರನ್ನು ಯಾವುದೇ ಒಂದು ಸ್ವರ್ಗ ಲೋಕಕ್ಕೆ ಕರೆದೊಯ್ಯುವಂತೆ ಮಾಡುತ್ತದೆ. ಎತ್ತರದ ಜಲಪಾತವನ್ನು ಇಷ್ಟು ಹತ್ತಿರದಿಂದ ನೋಡುವಂತ ಭಾಗ್ಯ ಇಲ್ಲಿ ಮಾತ್ರ ದೊರಕುತ್ತದೆ.

(Kudlu Tirtha Falls is a favourite destination of trekkers)

Comments are closed.