ಉಪ್ಪುಂದ ಮೀನುಗಾರರ ಸಹಕಾರ ಸಂಘದಲ್ಲಿ 80 ಲಕ್ಷಕ್ಕೂ ಅಧಿಕ ವಂಚನೆ : ಮಾಜಿ ಸಿಇಒ ಮತ್ತು ಮ್ಯಾನೇಜರ್ ವಿರುದ್ಧ ಎಫ್‌ಐಆರ್
ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಶ್ರೀನಿವಾಸ ಕೆ ಅವರು ನೀಡಿದ ದೂರಿನನ್ವಯ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಂದೂರು : ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದಲ್ಲಿ ಬರೋಬ್ಬರಿ 80 ಲಕ್ಷ ರೂಪಾಯಿ ವಂಚನೆ ನಡೆದಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ. ಸಂಘದ ಮಾಜಿ ಸಿಇಓ ಹಾಗೂ ಮ್ಯಾನೇಜರ್ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಮೀನುಗಾರರ ಸಹಕಾರ ಸಂಘದಲ್ಲಿನ ಹಣವನ್ನು ತನ್ನ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡು ಸಂಸ್ಥೆಗೆ ದ್ರೋಹ ಬಗೆದಿರುವ ಆರೋಪ ಕೇಳಿಬಂದಿದೆ.
ವಂಚನೆ ನಡೆದಿದ್ದು ಹೇಗೆ ?
ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಶ್ರೀನಿವಾಸ ಕೆ ಅವರು ನೀಡಿದ ದೂರಿನನ್ವಯ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಿದ್ದ ಸುಭಾಶ್ಚಂದ್ರ (39 ವರ್ಷ) ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ದೀಪಕ್ ಕುಮಾರ್ (35 ವರ್ಷ) ಅವರು ಈ ಹಗರಣದ ಪ್ರಮುಖ ಆರೋಪಿಗಳು.
Also Read : ಮಣಿಪಾಲ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಹೈಟೆಕ್ ಕಾಪಿ ದಂಧೆ ಯತ್ನ; ಉತ್ತರಖಂಡದ ವಿದ್ಯಾರ್ಥಿ ಅರೆಸ್ಟ್
2023-24ನೇ ಸಾಲಿನಲ್ಲಿ ಈ ಇಬ್ಬರು ಆರೋಪಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಂಘದ ಲೆಕ್ಕಪತ್ರದಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ. 2023-2024ರ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ (Auditing) ನಡೆದಾಗ ಈ ವಂಚನೆ ಬಯಲಾಗಿದೆ. ಆಡಿಟ್ ವರದಿಯಲ್ಲಿ ಒಟ್ಟು 80,91,996 ರೂಪಾಯಿಗಳ ವ್ಯತ್ಯಾಸ ಕಂಡುಬಂದಿದ್ದು, ಈ ಮೊತ್ತವನ್ನು ಆರೋಪಿಗಳು ತಮ್ಮ ಸ್ವಂತ ಬಳಕೆಗೆ ಬಳಸಿಕೊಂಡಿರುವುದು ದೃಢಪಟ್ಟಿದೆ.
ನ್ಯಾಯಾಲಯದ ಮೊರೆ ಹೋದ ಸಂಘ
ಸಂಘದ ಗಮನಕ್ಕೆ ಈ ವಂಚನೆ ಬಂದ ತಕ್ಷಣ, ಅಧಿಕಾರಿಗಳು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಬೈಂದೂರು ಪೊಲೀಸರು ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.
Also Read : ಬ್ರಹ್ಮಾವರ: ಫೋಟೋಗ್ರಾಫರ್ ಆತ್ಮಹತ್ಯೆ: ಶೂಟಿಂಗ್ ಮುಗಿಸಿ ಮನೆಗೆ ಬಂದ ಬೆನ್ನಲ್ಲೇ ದುರಂತ
ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026ರಡಿ ಪ್ರಕರಣ ದಾಖಲಾಗಿದ್ದು, ಹೊಸ ಕಾನೂನುಗಳಾದ ಬಿಎನ್‌ಎಸ್ (BNS) ಅಡಿಯಲ್ಲಿ ವಿವಿಧ ಕಠಿಣ ಕಲಂಗಳನ್ನು ಹಾಕಲಾಗಿದೆ.
ಲಕ್ಷಾಂತರ ರೂಪಾಯಿ ವಂಚನೆ : ಮೀನುಗಾರರ ಆಕ್ರೋಶ
ಕರಾವಳಿಯ ಸಾಂಪ್ರದಾಯಿಕ ಮೀನುಗಾರರ ನಂಬಿಕೆಯ ಮೇಲೆ ಈ ಸಂಘವು ಕಾರ್ಯನಿರ್ವಹಿಸುತ್ತಿತ್ತು. ಬಡ ಮೀನುಗಾರರು ಕಷ್ಟಪಟ್ಟು ದುಡಿದ ಹಣವನ್ನು ಸಂಘದಲ್ಲಿ ಇಟ್ಟಿದ್ದರು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದವರೇ ಇಷ್ಟು ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡಿರುವುದು ಮೀನುಗಾರ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಂಘಕ್ಕೆ ಸೇರಿದ ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.
byndoor fishermen cooperative society fraud case fir registered



