ಕಾರ್ಕಳ : ಪಡುಕುಡೂರು- ಖಜಾನೆ ರಸ್ತೆ ಅಕ್ರಮವಾಗಿ ಅಗೆದ ಮುನಿಯಾಲು ಉದಯ್ ಶೆಟ್ಟಿ ವಿರುದ್ದ ಕ್ರಮಕ್ಕೆ ನವೀನ್ ನಾಯಕ್ ಆಗ್ರಹ
ಕಾರ್ಕಳ : ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿರುವ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ (Muniyalu Uday kumar Shetty ) ವಿರುದ್ದ ಕ್ರಮಕೈಗೊಳ್ಳುವಂತೆ ಬಿಜೆಪಿಯ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ( Naveen Nayak) ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ದ ಸಾರ್ವಜನಿಕ ರಸ್ತೆಯನ್ನು ಅಗೆದು ಹಾಕಿರುವ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
ಕಾರ್ಕಳ ತಾಲೂಕಿನ ವರಂಗ ಗ್ರಾಮದಲ್ಲಿರುವ ಕುರ್ಪಾಡಿ, ಮುನಿಯಾಲು – ಖಜಾನೆ ಸಂಪರ್ಕಿಸುವ ಸುಮಾರು 1.2 ಕಿಲೋ ಮೀಟರ್ ರಸ್ತೆಯನ್ನು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ನಡೆಸಲು ಲೋಕೋಪಯೋಗಿ ಇಲಾಖೆ ಪ್ರಶಾಂತ್ ಶೆಟ್ಟಿ ಮೊಳಹಳ್ಳಿ ಅವರಿಗೆ ಗುತ್ತಿಗೆ ನೀಡಲಾಗಿತ್ತು.
ಪಿಡಬ್ಲ್ಯುಡಿ ಗುತ್ತಿಗೆದಾರರಾದ ಪ್ರಶಾಂತ್ ಮೊಳಹಳ್ಳಿ ಅವರು ಕಾಮಗಾರಿಯನ್ನು ಒಂದೆಡೆ ಕೈಗೆತ್ತಿಕೊಂಡ್ರೆ, ಮತ್ತೊಂದೆಡೆಯಲ್ಲಿನ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಟೆಂಡರ್ ಆಗದೇ ಇರುವ ರಸ್ತೆಯನ್ನು ಅಗೆದು ಹಾಕಿರುವ ಕುರಿತು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಪ್ರಶಾಂತ್ ಮೊಳಹಳ್ಳಿ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಆದರೆ ಪ್ರಶಾಂತ್ ಮೊಳಹಳ್ಳಿ ಅವರು ಲೋಕೋಪಯೋಗಿ ಇಲಾಖೆಗೆ ತಾನು ಟೆಂಡರ್ ಆಗದ ರಸ್ತೆಯನ್ನು ಅಗೆದಿಲ್ಲ ಎಂದು ಲಿಖಿತ ಉತ್ತರವನ್ನು ನೀಡಿದ್ದಾರೆ. ನಂತರದಲ್ಲಿ ಪರಿಶೀಲಿಸಿದಾಗ ಟೆಂಡರ್ ಆಗದ ರಸ್ತೆಯನ್ನು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಗೆದು ಹಾಕಿದ್ದಾರೆ ಅನ್ನೋದು ತಿಳಿದು ಬಂದಿದೆ.
ಇದನ್ನೂ ಓದಿ : ಸಾರ್ವಜನಿಕ ರಸ್ತೆಗೆ ಹಾಕಿ, ಗುತ್ತಿಗೆದಾರರ ಮೇಲೆ ದಬ್ಬಾಳಿಕೆ ಆರೋಪ : ಮುನಿಯಾಲು ವಿರುದ್ದ ಕ್ರಮಕ್ಕೆ ಸುರೇಶ್ ಶೆಟ್ಟಿ ಆಗ್ರಹ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ತನ್ನನ್ನು ಬಿಟ್ಟು ಬೇರೆ ಯಾವುದೇ ಗುತ್ತಿಗೆದಾರರು ಕಾಮಗಾರಿ ಮಾಡಬಾರದು ಅನ್ನೋ ಕಾರಣಕ್ಕೆ ಇದೀಗ ಕುರ್ಪಾಡಿ, ಮುನಿಯಾಲು – ಖಜಾನೆ ರಸ್ತೆಯನ್ನು ಅಗೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ಸೇರಿರುವ ರಸ್ತೆಗೆ ಟೆಂಡರ್ ಆಗದೇ ಇದ್ದರೂ ಕೂಡ ಅದನ್ನು ಅಗೆದು ಹಾಕಿದ್ದಾರೆ. ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಧೋರಣೆಯನ್ನು ನೋಡಿದ್ರೆ ಈ ಅಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರಾ ಎಂದು ನವೀನ್ ನಾಯಕ್ ಪ್ರಶ್ನಿಸಿದ್ದಾರೆ.
ಟೆಂಡರ್ ಆಗದೇ ಇರುವ ರಸ್ತೆಯನ್ನು ಅಗೆಯುವುದಕ್ಕೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರ ವಾಹನಗಳು ಬಂದಿವೆ. ಅಲ್ಲದೇ ಅವರ ಕೆಲಸದವರಿಂದಲೇ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಕುರಿತು ತನ್ನ ಬಳಿಯಲ್ಲಿ ದಾಖಲೆಗಳಿವೆ. ಇಲಾಖೆಯ ಅಧಿಕಾರಿಗಳು ಮೊಕ್ಕದ್ದಮೆಯನ್ನು ದಾಖಲಿಸಬೇಕು. ಅಲ್ಲದೇ ಸಾರ್ವಜನಿಕ ರಸ್ತೆಗೆ ಹಾನಿ ಉಂಟು ಮಾಡಲು ಮುನಿಯಾಲು ಅವರಿಗೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಮೋದಿ ರೋಡ್ ಶೋ ರದ್ದು ..! ಬದಲಾವಣೆ ಆಯ್ತು ಕಾರ್ಯಕ್ರಮ
ಕಳೆದ ಎರಡು ವರ್ಷಗಳಿಂದಲೂ ದಬ್ಬಾಳಿಕೆಯ ರಾಜಕಾರಣ ಕಾರ್ಕಳದಲ್ಲಿ ನಡೆಯುತ್ತಿದೆ. ಕಾರ್ಕಳದ ಅಭಿವೃದ್ದಿಗಾಗಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಒಂದೇ ಒಂದು ಮನವಿಯನ್ನೂ ಸರಕಾರಕ್ಕೆ ಸಲ್ಲಿಕೆ ಮಾಡಿಲ್ಲ. ಇದೀಗ ಸಾರ್ವಜನಿಕ ರಸ್ತೆ ಅಗೆದು ಹಾಕಿರುವ ಮುನಿಯಾಲು ವಿರುದ್ದ ಮೊಕದ್ದಮೆ ದಾಖಲಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯಿಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
Karkala: Naveen Naik demands action against Muniyalu Uday kumar Shetty who dug Padukudur-Khajane road



