ಮಣಿಪಾಲ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಹೈಟೆಕ್ ಕಾಪಿ ದಂಧೆ ಯತ್ನ; ಉತ್ತರಖಂಡದ ವಿದ್ಯಾರ್ಥಿ ಅರೆಸ್ಟ್

ಹೆಬ್ರಿ ಜವಹಾರ್ ನವೋದಯ ವಿದ್ಯಾಲಯದ ಸಹಾಯಕ ಪ್ರಾಂಶುಪಾಲರಾದ ವಿ.ಕೆ. ಮನೋಹರ್ ಕುಮಾರ್ ಅವರು ಅಂದು ಪರೀಕ್ಷಾ ಪರಿವೀಕ್ಷಕರಾಗಿ (Observer) ಕಾರ್ಯನಿರ್ವಹಿಸುತ್ತಿದ್ದರು.

ಮಣಿಪಾಲ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪ್ರತಿಷ್ಠಿತ ಜೆಇಇ (JEE) ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ ಗಂಭೀರ ಪ್ರಕರಣವೊಂದು ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷಾ ಅಕ್ರಮ ತಡೆ ಕಾಯ್ದೆಯಡಿ ಉತ್ತರಖಂಡ ಮೂಲದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್ 5ರಂದು ಮಣಿಪಾಲದ ಟಿ.ಎಂ.ಎ ಪೈ (TMA Pai) ಪಾಲಿಟೆಕ್ನಿಕ್ ಕಾಲೇಜಿನ ‘ಐಯಾನ್ ಡಿಜಿಟಲ್ ಜೋನ್’ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹೆಬ್ರಿ ಜವಹಾರ್ ನವೋದಯ ವಿದ್ಯಾಲಯದ ಸಹಾಯಕ ಪ್ರಾಂಶುಪಾಲರಾದ ವಿ.ಕೆ. ಮನೋಹರ್ ಕುಮಾರ್ ಅವರು ಅಂದು ಪರೀಕ್ಷಾ ಪರಿವೀಕ್ಷಕರಾಗಿ (Observer) ಕಾರ್ಯನಿರ್ವಹಿಸುತ್ತಿದ್ದರು.

ಮಧ್ಯಾಹ್ನದ ಅವಧಿಯ ಪರೀಕ್ಷೆ ಸಂಜೆ 3 ಗಂಟೆಗೆ ಆರಂಭವಾಗಿತ್ತು. ಈ ವೇಳೆ ಲ್ಯಾಬ್ ‘ಎ’ ನ ಸಿಸ್ಟಮ್ ಸಂಖ್ಯೆ C-018 ರಲ್ಲಿ ಪರೀಕ್ಷೆ ಬರೆಯುತ್ತಿದ್ದ ಉತ್ತರಖಂಡ ಮೂಲದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್, ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿ ತನ್ನೊಂದಿಗೆ ಮೊಬೈಲ್ ಫೋನ್ ಅನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ದಿದ್ದನು.

ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಅರೀದಮಾನ್ ಸಿಂಗ್ ತನ್ನ ಮೊಬೈಲ್ ಮೂಲಕ ಕಂಪ್ಯೂಟರ್ ಪರದೆಯ ಮೇಲಿದ್ದ ಸಂಪೂರ್ಣ ಪ್ರಶ್ನೆ ಪತ್ರಿಕೆಯನ್ನು ಫೋಟೋ ತೆಗೆದಿದ್ದಾನೆ. ಈ ಫೋಟೋಗಳನ್ನು ಹೊರಗಿರುವ ವ್ಯಕ್ತಿಗಳಿಗೆ ಕಳುಹಿಸಿ, ಉತ್ತರಗಳನ್ನು ಪಡೆದುಕೊಳ್ಳಲು ಅಥವಾ ಪತ್ರಿಕೆಯನ್ನು ಪ್ರಸಾರ ಮಾಡಲು ಯತ್ನಿಸುತ್ತಿದ್ದಾಗ ಪರೀಕ್ಷಾ ಅಧಿಕಾರಿಗಳ ಕೈಗೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

Also Read : ಬ್ರಹ್ಮಾವರ: ಫೋಟೋಗ್ರಾಫರ್ ಆತ್ಮಹತ್ಯೆ: ಶೂಟಿಂಗ್ ಮುಗಿಸಿ ಮನೆಗೆ ಬಂದ ಬೆನ್ನಲ್ಲೇ ದುರಂತ

ಕೇಂದ್ರದ ವೆನ್ಯೂ ಕಮಾಂಡಿಂಗ್ ಅಧಿಕಾರಿ ಮನೋಜ್ ಕುಮಾರ್ ಹಾಗೂ ಅಡ್ಮಿನ್ ಮ್ಯಾನೇಜರ್ ಮಹೇಶ್ ನಾಯ್ಕ್ ಅವರ ಗಮನಕ್ಕೆ ಈ ವಿಚಾರ ಬಂದ ತಕ್ಷಣ, ವಿದ್ಯಾರ್ಥಿಯನ್ನು ತಪಾಸಣೆ ನಡೆಸಿ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಪರೀಕ್ಷಾ ಅಕ್ರಮದ ಗಂಭೀರತೆಯನ್ನು ಪರಿಗಣಿಸಿ, ವಿ.ಕೆ. ಮನೋಹರ್ ಕುಮಾರ್ ಅವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಅಪರಾಧ ಕ್ರಮಾಂಕ 49/2026 ರಂತೆ, ಹೊಸದಾಗಿ ಜಾರಿಗೆ ಬಂದಿರುವ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024’ (The Public Examinations Prevention of Unfair Means Act 2024) ರ ಕಲಂ 03, 04 ಹಾಗೂ 10 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read : ಉಡುಪಿ :ಊಟ ಮುಗಿಸಿ ಮಲಗಲು ತೆರಳಿದ್ದ ಯುವತಿ ಆತ್ಮಹತ್ಯೆ

ಪರೀಕ್ಷಾ ಕೇಂದ್ರಕ್ಕೆ ಕೇವಲ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಅಡ್ಮಿಟ್ ಕಾರ್ಡ್‌ಗೆ ಮಾತ್ರ ಅನುಮತಿ ಇರುತ್ತದೆ. ಇಷ್ಟೆಲ್ಲಾ ಬಿಗಿ ಭದ್ರತೆಯ ನಡುವೆಯೂ ವಿದ್ಯಾರ್ಥಿ ಮೊಬೈಲ್ ಒಳಗೆ ತಂದಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈ ಘಟನೆಯು ಪರೀಕ್ಷಾ ಕೇಂದ್ರಗಳಲ್ಲಿನ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಪರೀಕ್ಷಾ ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

manipal jee mains exam malpractice uttarakhand student arrested unfair means act 2024

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories