Pramod Madhwaraj : ಶ್ರೀಕೃಷ್ಣಮಠದಲ್ಲಿ ಮೋದಿ ಭೇಟಿಗಿಲ್ಲ ಅವಕಾಶ : ಪ್ರಮೋದ್ ಮಧ್ವರಾಜ್ ಹೇಳಿದ್ದೇನು ?

- ವರದಿ : ಅಶ್ವಥ್ ಆಚಾರ್ಯ ಎಡಬೆಟ್ಟು
Pramod Madhwaraj : ಉಡುಪಿ : ಶ್ರೀ ಕೃಷ್ಣಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ವೇಳೆಯಲ್ಲಿ ಕನಕನ ಕಿಂಡಿಗೆ ಸ್ವರ್ಣಲೇಪನ ಮಾಡಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ನೀಡದೇ ಇರುವುದು ಸಾಕಷ್ಟು ಚರ್ಚೆ ಆಗುತ್ತಿದೆ. ಈ ಹಿನ್ನೆಲೆಯಲ್ಲೀಗ ಪ್ರಮೋದ್ ಮಧ್ವರಾಜ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಆಯೋಜಿಸಿದ್ದ ಲಕ್ಷಕಂಠ ಗೀತಾ ಪಾರಾಯಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿದ್ದರು. ಇದೇ ವೇಳೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಿರ್ಮಿಸಿದ್ದ ಸ್ವರ್ಣ ಲೇಪಿತ ಕನಕನ ಕಿಂಡಿಯನ್ನು ಮೋದಿ ಉದ್ಘಾಟಿಸಿದ್ದರು. ಆದರೆ ಪ್ರಮೋದ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದೇನು ?
ಪ್ರಧಾನಿ ಮೋದಿ ಅವರು ಕನಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚಿನ್ನದ ಕವಚವನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಗದಿರುವುದು ದೊಡ್ಡ ವಿಷಯವಲ್ಲ. ಆ ಪ್ರದೇಶಕ್ಕೆ ಬೇರೆ ಬೇರೆ ಕಾರಣಗಳಿಂದ ನನಗೆ ಹೋಗಲು ಅವಕಾಶ ಸಿಗಲಿಲ್ಲ ಎಂದಿದ್ದಾರೆ.
ಸ್ವರ್ಣಮಯ ಕವಚ ನಿರ್ಮಾಣ ಮಾಡುವಾಗ ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ನರೇಂದ್ರ ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾದಾಗ ಸ್ವಾಮೀಜಿ ಉದ್ಘಾಟನೆಗೆ ವ್ಯವಸ್ಥೆ ಮಾಡಿದರು. ನನ್ನ ತಂದೆ ನಿರ್ಮಿಸಿದ ಕನಕನ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದ್ದಾರೆ. ಇದು ಕೊನೆಯ ಗಳಿಗೆಯಲ್ಲಿ ನಿರ್ಧಾರವಾದ ಕಾರ್ಯಕ್ರಮ ಎಂದಿದ್ದಾರೆ.
ಪ್ರಧಾನಿ ಮೋದಿಯವರಿಗೆ ದೇವರು ಬುದ್ಧಿ ಕೊಟ್ಟು ಗೌರವಾರ್ಪಣೆ ಮಾಡಿದ್ದಾರೆ. ಸ್ವಾಮೀಜಿಯವರು ಹೇಳಿದ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಸಂತೋಷದ ಮುಂದೆ, ಆಹ್ವಾನ ನೀಡದಿರುವುದು ವಿಷಯವೇ ಅಲ್ಲ. ಬೇಸರ ದುಮ್ಮಾನ ಜಿಗುಪ್ಸೆ ಏನು ಆಗಿಲ್ಲ. ಟಿವಿಯಲ್ಲಿ ಅರ್ಪಣೆಯ ದೃಶ್ಯ ನೋಡಿ ಸಂತೋಷ ಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಉಡುಪಿ ಮಣ್ಣಿನಲ್ಲಿ ಪಾದಸ್ಪರ್ಶ ಮಾಡಿರುವುದು ನನ್ನ ಪುಣ್ಯ : ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ ಭಾಷಣ
Pramod Madhwaraj : ಯಾರಿಂದ ಪ್ರವೇಶ ನಿಷೇಧವಾಯ್ತು ಗೊತ್ತಿಲ್ಲ ?
ನನಗೆ ಪ್ರವೇಶ ಯಾರಿಂದ, ಯಾಕಾಗಿ ನಿಷೇಧರಿಸಲ್ಪಟ್ಟಿತು ಗೊತ್ತಿಲ್ಲ. ಇವೆಲ್ಲ ಕ್ಷುಲ್ಲಕ ವಿಚಾರಗಳು, ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೋದಿ ಅವರೇ ಬಂದು ನನ್ನ ಮತ್ತು ತಂದೆಯ ಸೇವೆಯನ್ನು ಸ್ಪರ್ಶಿಸಿದ್ದಾರೆ. ಇದಕ್ಕಿಂತ ಬೇರೆ ಖುಷಿ ನನಗೆ ಬೇಡ. ಅಷ್ಟು ಜನರನ್ನು ಕರೆದಾಗ ನನ್ನನ್ನು ಕರೆಯಲು ಅವಕಾಶ ಇದ್ದಿರಬಹುದು. ಯಾವ ಕಾರಣಕ್ಕಾಗಿ ಕತೆದಿಲ್ಲ ಗೊತ್ತಿಲ್ಲ ಎಂದಿದ್ದಾರೆ.
ಇದು ಕೂಡ ದೈವೇಚ್ಚೇ ಆಗಿರಬಹುದು ಎಂದು ಭಾವಿಸುತ್ತೇನೆ ಯಾರನ್ನು ಕೂಡ ದೂಷಿಸುವುದಿಲ್ಲ. ಯಾವುದೇ ನೋವು ಬೇಸರ ಆಗದಂತೆ ನಾನೊಂದು ಕವಚದ ಒಳಗೆ ಸುರಕ್ಷಿತವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ಕನಕದಾಸರಂತೆ ಪ್ರಮೋದ್ ಮುಧ್ವರಾಜ್ ಅವರನ್ನು ಕೂಡ ಹೊರಗಿಟ್ಟಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್ ಅವರು, ಎಲ್ಲಾ ಅಪಮಾನ ಸಹಿಸಿಕೊಂಡು ಕನಕದಾಸರು ಕೃಷ್ಣನ ಭಕ್ತಿಯ ಶಕ್ತಿ ಎಂದು ಭಾವಿಸಿದವರು.
ಕೃಷ್ಣದೇವರು ಕನಕದಾಸರಿಗಿಂತ ಮುಂಚೆಯೂ ಯಾರಿಗೂ ಒಲಿದಿಲ್ಲ ನಂತರ ಒಲಿದಿಲ್ಲ. ಕನಕದಾಸರ ಭಕ್ತಿ ಶಕ್ತಿಯ ಮುಂದೆ ನಾನು ಕ್ಷುಲ್ಲಕ. ಅವರು ಸೂರ್ಯನಾದರೆ ನಾನು ಮಿಂಚುಹುಳ. ನನಗೆ ಯಾವುದೇ ಅವಮಾನ ಆಗಿಲ್ಲ ಸನ್ಮಾನವಾಗಿದೆ. ಬಿಜೆಪಿಯವರು ಯಾಕೆ ಕರೆದಿಲ್ಲ ಅನ್ನೋದು ಪಕ್ಷಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.
ಮುಂದಿನದ್ದು ಕೃಷ್ಣ ಕನಕದಾಸರಿಗೆ ಬಿಟ್ಟ ವಿಚಾರ
ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಕೊಟ್ಟ ಎಲ್ಲಾ ಕೆಲಸ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದೇನೆ. ಮುಂದಿನದ್ದು ಕೃಷ್ಣ ಕನಕದಾಸರಿಗೆ ಬಿಟ್ಟ ವಿಚಾರ. ನಾನು ಯಾರ ಬಳಿಯೂ ಕರೆದಿಲ್ಲ ಎಂದು ಹೇಳಿಕೊಂಡಿಲ್ಲ.
ಎಲ್ಲರೂ ಅವರಾಗಿಯೇ ಕರೆ ಮಾಡಿ ನಾವಲ್ಲ ನಾವಲ್ಲ ಎನ್ನುತ್ತಿದ್ದಾರೆ.ಪುತ್ತಿಗೆ ಸ್ವಾಮೀಜಿಗಳು ಕೂಡ ನಾವಲ್ಲ ಎಂದು ಹೇಳಿದ್ದಾರೆ. ಸೇವೆ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಪುತ್ತಿಗೆ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದ್ದೇನೆ.
ಕನಕನ ಗುಡಿ ಕನಕನಕಿಂಡಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ್ದು. ಹಾಗಾಗಿ ಆ ಪ್ರದೇಶದಲ್ಲಿ ನನಗೆ ಎಲ್ಲಾದರೂ ಪ್ರವೇಶ ಇರಬಹುದು ಎಂದು ನಿರೀಕ್ಷಿಸಿದ್ದೆ. ಕೊನೆಯ ಗಳಿಗೆಯವರೆಗೂ ಮಾಹಿತಿ ಬರಲಿಲ್ಲ. ಸಭೆಗೆ ಹೋಗಲು ನಾನು ಪಾಸ್ ವ್ಯವಸ್ಥೆ ಮಾಡಿಕೊಂಡಿಲ್ಲ. ಸಭೆಗೆ ಪಾಸ್ ಕೂಡ ನನಗೆ ಸಿಕ್ಕಿಲ್ಲ.
ಮೋದಿಯವರನ್ನು ನೋಡಲೇಬೇಕು ಎಂದಿದ್ದರೆ ರೋಡ್ ಶೋಗೆ ಹೋಗಬೇಕಿತ್ತು. ರೋಡ್ ಶೋ ಗೆ ಬಂದರೆ ಬೇರೆ ಬಣ್ಣ ಬರುತ್ತದೆ. ಮನೆಯಲ್ಲಿ ಟಿವಿಯಲ್ಲಿ ಕಣ್ತುಂಬಿಕೊಂಡು ನೋಡಿದ್ದೇನೆ ಎಂದಿದ್ದಾರೆ. ಆದರೆ ಪ್ರಮೋದ್ ಮಧ್ವರಾಜ್ ಅವರಿಗೆ ಮೋದಿ ಭೇಟಿಗೆ ಅವಕಾಶ ನೀಡದೇ ಇರುವುದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ.
No chance to meet Modi at Udupi Sri Krishna Matha What did Pramod Madhwaraj say ?



