Service suspension at Aadhaar Kendra: ಕುಂದಾಪುರ ತಾಲ್ಲೂಕು ಕಚೇರಿಯ ಆಧಾರ್ ಕೇಂದ್ರದಲ್ಲಿ ಸೇವೆ ಸ್ಥಗಿತ: ಏಜೆನ್ಸಿ ಬದಲಾವಣೆ ಬಳಿಕ ಸಾರ್ವಜನಿಕರು ಪರದಾಟ
ಉಡುಪಿ: Service suspension at Aadhaar Kendra: ಕುಂದಾಪುರ ತಾಲ್ಲೂಕು ಕಚೇರಿಯ ಆಧಾರ್ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಆಧಾರ್ ಸಂಬಂಧಿತ ಯಾವುದೇ ಸೇವೆಗಳು ಲಭ್ಯವಿಲ್ಲ. ಹಳೆಯ ಏಜೆನ್ಸಿಯ ಗುತ್ತಿಗೆ ಅವಧಿ ಮುಗಿದು, ಸೇವೆಯನ್ನು ಹೊಸ ಏಜೆನ್ಸಿಗೆ ಹಸ್ತಾಂತರಿಸಿರುವ ಪರಿಣಾಮವಾಗಿ ಈ ವಿಳಂಬ ಉಂಟಾಗಿದೆ. ಕೇಂದ್ರಕ್ಕೆ ಮಾಹಿತಿಯಿಲ್ಲದೇ ಆಗಮಿಸುವ ಸಾರ್ವಜನಿಕರು ಮರಳಿ ನಿರಾಸೆಯಿಂದ ತೆರಳುವ ಪರಿಸ್ಥಿತಿ ಎದುರಾಗಿದೆ.
ಹಳೆಯ ಏಜೆನ್ಸಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮಾಣೀಕೃತ ಆಪರೇಟರ್‌ಗಳ ಲಾಗಿನ್ ಐಡಿಗಳು ಅವಧಿ ಮುಗಿದ ತಕ್ಷಣವೇ ಸ್ವಯಂಚಾಲಿತವಾಗಿ ಲಾಕ್ ಆಗಿವೆ. ಹೊಸ ಏಜೆನ್ಸಿ ಅಡಿಯಲ್ಲಿ ಆಪರೇಟರ್‌ಗಳನ್ನು ಮರುನೋಂದಣಿ ಮಾಡುವುದು ಮತ್ತು ಯುಐಡಿಎಐಯಿಂದ ಹೊಸ ಲಾಗಿನ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದರಿಂದ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಸಾಮಾನ್ಯವಾಗಿ ಏಜೆನ್ಸಿ ಬದಲಾವಣೆಯ ಸಮಯದಲ್ಲಿ ಹಳೆಯ ಮತ್ತು ಹೊಸ ಲಾಗಿನ್‌ಗಳನ್ನು ತಾತ್ಕಾಲಿಕವಾಗಿ ಬಳಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ಆ ಪ್ರಕ್ರಿಯೆ ಜಾರಿಯಾಗದ ಹಿನ್ನೆಲೆಯಲ್ಲಿ ಹೊಸ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್ ಸೇರಿದಂತೆ ಎಲ್ಲಾ ಸೇವೆಗಳು ನಿಂತಿವೆ. ಯುಐಡಿಎಐ ಮಾನ್ಯತೆ ಪಡೆದ ಆಪರೇಟರ್‌ಗಳಿದ್ದರೂ ಆನ್‌ಬೋರ್ಡಿಂಗ್ ಪೂರ್ಣಗೊಳ್ಳದ ಕಾರಣ ಅವರು ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ.
Also Read: ರಾ.ಹೆ. 66 ಸರ್ವಿಸ್ ರಸ್ತೆ–ಪ್ಲೈಓವರ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ: ಹೋರಾಟ ಸಮಿತಿಗೆ ಸಂತೋಷ
ಈ ಪರಿಣಾಮವಾಗಿ ವಿವಿಧ ಗ್ರಾಮಗಳಿಂದ ಆಗಮಿಸುವ ಜನರು ಹಾಗೂ ಬ್ಯಾಂಕ್–ಸರ್ಕಾರಿ ಕಚೇರಿಗಳಿಂದ ಕಡ್ಡಾಯ ಆಧಾರ್ ಸೇವೆಗಳಿಗಾಗಿ ಬರುವವರು ದಿನಂಪ್ರತಿ ವ್ಯರ್ಥ ಪ್ರಯಾಣ ಮಾಡುತ್ತಿದ್ದಾರೆ. ಸೇವೆಗಾಗಿ ಪದೇಪದೆ ಕೇಂದ್ರಕ್ಕೆ ಭೇಟಿ ನೀಡಬೇಕಾದ ಪರಿಸ್ಥಿತಿಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ.
ಏಜೆನ್ಸಿ ಬದಲಾವಣೆ ಮತ್ತು ಗುತ್ತಿಗೆ ನವೀಕರಣದ ಸಂದರ್ಭದಲ್ಲಿ ಹೊಸ ಲಾಗಿನ್ ಐಡಿ/ಬೈಂಡಿಂಗ್ ಕೋಡ್‌ಗಳ ಜಾರಿ ನಿಧಾನಗತಿಯಾದರೆ ಸಾರ್ವಜನಿಕರಿಗೆ ತೊಂದರೆ ತಪ್ಪದು ಹೀಗಾಗಿ ಇನ್ನೆರಡು ಮೂರು ದಿನಗಳಲ್ಲಿ ಮತ್ತೆ ಸೇವೆ ಎಂದಿನಂತೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



