‘ಯಕ್ಷರಂಗ ಜಂಗಮ’ ಮೊಗೆಬೆಟ್ಟಿಗೆ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ-2020

0

ಯಕ್ಷಗಾನ ಕ್ಷೇತ್ರದ ಹೆಸರಾಂತ ಕಲಾವಿದರು, ಅಭಿನವ ಶನೀಶ್ವರ ಎಂದೇ ಕರೆಸಿಕೊಂಡ ಜಲವಳ್ಳಿ ವೆಂಕಟೇಶ ರಾವ್ ಅವರ ಹೆಸರಿನ ಪ್ರತಿಷ್ಠಿತ ಜಲವಳ್ಳಿ ಪ್ರಶಸ್ತಿ ಗೆ ಪ್ರಖ್ಯಾತ ಛಂದೋಬದ್ಧ ಯಕ್ಷಗಾನ ಕವಿ, ಯಕ್ಷಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದ, ಜಲವಳ್ಳಿಯವರ ಪುತ್ರ ವಿದ್ಯಾಧರ ರಾವ್ ಜಲವಳ್ಳಿ ಯವರ ಸಂಚಾಲಕತ್ವದ ಸಮಿತಿ ಈ ಪ್ರಶಸ್ತಿ ಘೋಷಿಸಿದೆ.

ಫೆಬ್ರವರಿ 22 ರಂದು ಉತ್ತರ ಕನ್ನಡದ ಜಲವಳ್ಳಿಯ ಹಿರೇ ಹಿತ್ತಲಿನ ಜಲವಳ್ಳಿ ಯವರ ನಿವಾಸದಲ್ಲಿ ಜಲವಳ್ಳಿ ವೆಂಕಟೇಶ ರಾವ್ ಅವರ ಪ್ರಥಮ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಗುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲಿ ಜಲವಳ್ಳಿ ವೆಂಕಟೇಶ ರಾವ್ ಅವರು ದಂತಕಥೆ. ಆರು ದಶಕಗಳ ಕಾಲ ವಿಜ್ರಂಭಿಸಿದ ಮಹಾನ್ ಕಲಾವಿದರು. ಸತತ ಸಾಧನೆ, ಪರಿಶ್ರಮ, ಸ್ವಯಂ ಪ್ರತಿಭೆಯಿಂದ ಗೆದ್ದು ಸಾಗಿದ ಜಲವಳ್ಳಿಯವರು ಅಳಿಸಲಾಗದ ಕಲಾಸಾಧನೆ ಮಾಡಿದ ಕಲಾತಪಸ್ವಿ. ಯಕ್ಷಗಾನ ಇರುವವರೆಗೂ ಅವರ ಕೀರ್ತಿ ಅಜರಾಮರ.

ಯಕ್ಷಲೋಕದ ಮಾಂತ್ರಿಕ ಪ್ರತಿಭೆ ಮೊಗೆಬೆಟ್ಟು

ಕುಂದಾಪುರ ತಾಲೂಕು ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬ ಪುಟ್ಟ ಊರಿನ ಹೆಸರನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಿರಿಯ ಯಕ್ಷಗಾನ ಕಲಾವಿದ ಮೊಗೆಬೆಟ್ಟು ಹಿರಿಯ ನಾಯ್ಕ- ಗುಲಾಬಿ ದಂಪತಿಗಳ ಏಕಮಾತ್ರ ಪುತ್ರ. ತನ್ನ ಹತ್ತನೆಯ ವಯಸ್ಸಿನಲ್ಲಿ ಬಭ್ರುವಾಹನನಾಗಿ ಯಕ್ಷಗಾನರಂಗಸ್ಥಳವೇರಿದ ಮೊಗೆಬೆಟ್ಟು ತನ್ನ 16ನೇ ವಯಸ್ಸಿನಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಯಾಗಿ ಸೇರ್ಪಡೆಗೊಂಡರು. ಅಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನೀಲಾವರ ಲಕ್ಷ್ಮಿ ನಾರಾಯಣಯ್ಯ, ಗೋರ್ಪಾಡಿ ವಿಠಲ ಪಾಟೀಲ ಭಾಗವತರಲ್ಲಿ ಸಾಂಪ್ರದಾಯಿಕ ಭಾಗವತಿಕೆ ಕಲಿತರು. ರಾಜ್ಯ ಪ್ರಶಸ್ತಿ ಪುರಸ್ಕೃತ ಗುರು ಬನ್ನಂಜೆ ಸಂಜೀವ ಸುವರ್ಣ ರಲ್ಲಿ ಯಕ್ಷಗಾನ ನ್ರತ್ಯ ಶಿಕ್ಷಣ ಪಡೆದರು. ಪ್ರಸಿದ್ಧ ಯಕ್ಷಗಾನ ಛಂದಸ್ಸು ವಿದ್ವಾಂಸ ಗಣೇಶ್ ಕೊಲೆಕಾಡಿಯವರಲ್ಲಿ ಯಕ್ಷಗಾನ ಛಂದಸ್ಸು ಶಿಕ್ಷಣ ಪಡೆದರು.

ಸತೀಶ ಕೆದ್ಲಾಯ, ದೇವದಾಸ ರಾವ್ ಕೂಡ್ಲಿ, ಕ್ರಷ್ಣ ಮೂರ್ತಿ ಭಟ್ ಇವರಿಗೆ ಕೇಂದ್ರದಲ್ಲಿ ಗುರುಗಳು. ಕಲಿತ ಕೇಂದ್ರದಲ್ಲಿಯೇ ಗುರುವಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮೊಗೆಬೆಟ್ಟು ಅವರು ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಐರ್ಲ್ಯಾಂಡ್, ಸಿಂಗಾಪುರ್, ಆಸ್ಟ್ರೇಲಿಯಾ ಮೊದಲಾದ ವಿದೇಶಗಳಲ್ಲಿ ಯಕ್ಷಗಾನ ಪ್ರತಿಭೆ ತೋರಿಸಿದರು. ದೆಹಲಿ, ಮುಂಬೈ, ಕೊಲ್ಕತ್ತಾ, ರಾಜಸ್ಥಾನ, ಸಿಕ್ಕಿಂ, ಮಣಿಪುರ, ಮದ್ರಾಸ್, ನಾಗ್ಪುರ್, ಒರಿಸ್ಸಾ, ಅಸ್ಸಾಂ, ಗುಜರಾತ್, ತಮಿಳು ನಾಡು, ಕೇರಳ, ಗೋವಾ ಸೇರಿದಂತೆ ಇಡೀ ಭಾರತವೇ ಸುತ್ತಿದ ಅಪರೂಪದ ಯಕ್ಷರಂಗ ಜಂಗಮ.

ಮಂಗಳೂರು ಆಕಾಶವಾಣಿ ಯಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ತಾಳಮದ್ದಳೆ ನೀಡಿದ ಇವರು ಬೆಂಗಳೂರು ದೂರದರ್ಶನ ಕಲಾವಿದರು ಹೌದು. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸಮಗ್ರ ಯಕ್ಷಗಾನ ಕಲಾವಿದರ ಬಗ್ಗೆ ಇವರು ಬರೆದ ಪರಿಚಯಾತ್ಮಕ ಲೇಖನ ಯಕ್ಷಗಾನ ಅಕಾಡೆಮಿ ‘ ಯಕ್ಷಗಾನ ಕಲೋಪಾಸಕರು ಎಂಬ ಮಹಾ ಗ್ರಂಥ ರೂಪದಲ್ಲಿ ಪ್ರಕಟಿಸಿದೆ. ತನ್ನ 14ನೆಯ ವಯಸ್ಸಿನಲ್ಲಿ ಯಕ್ಷಗಾನ ಆಡಿಯೋ ಹಾಸ್ಯಾಯಣ – ಕೋಳಿಪಡೆ ರಂಗ ಬರೆದಿದ್ದರು. ಇದು ಆ ಕಾಲದಲ್ಲಿ 5000ಕ್ಕೂ ಹೆಚ್ಚು ದಾಖಲೆಯ ಮಾರಾಟ ಕಂಡಿದೆ.

ಅಮೃತೇಶ್ವರಿ ಹಾಗೂ ಮಾಬುಕಳ ಮಹಾಗಣಪತಿಯ ಕುರಿತು ಇವರು ಬರೆದ ಭಕ್ತಿ ಗೀತೆಗಳ ಧ್ವನಿ ಸುರುಳಿ ಬಿಡುಗಡೆಗೊಂಡಿದೆ. ಯಕ್ಷಗಾನ ಪ್ರಪಂಚದಲ್ಲಿ ಮೊತ್ತ ಮೊದಲ ಸಂಪೂರ್ಣ ಕುಂದಾಪುರ ಕನ್ನಡ ದಲ್ಲಿ ನರಹರಿ ಹೊಯ್ಕೈ ಎಂಬ ಪೌರಾಣಿಕ ಪ್ರಸಂಗ ಬರೆದಿರುವುದು ಸಾರ್ವತ್ರಿಕ ದಾಖಲೆ. ಯಕ್ಷಗಾನ ತಾಳಮದ್ದಳೆ ರಂಗಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಎಂಬ ಚತುರ್ ಧರ್ಮದವರನ್ನು ಜೊತೆಗೂಡಿಸಿ ಕಲೆಯಲ್ಲಿ ಧರ್ಮ ಸಮನ್ವಯಗೊಳಿಸಿದ ಹಿರಿಮೆ ಇವರದ್ದು. ಹವ್ಯಾಸಿ ಯಕ್ಷಗಾನರಂಗದಲ್ಲಿ ದೀವಟಿಗೆ ಬೆಳಕಿನ ಯಕ್ಷಗಾನದ ರಂಗ ನಿರ್ದೇಶನದ ಮೂಲಕ ಶತಮಾನದ ಹಿಂದಿನ ಯಕ್ಷಗಾನ ತೋರಿಸಿದವರು. ಅಟ್ಟಣಿಗೆ ಆಟ, ಕುಂದಾಪುರ ಕನ್ನಡ ಆಟ. ಹೀಗೆ ಹಲವಾರು ಪ್ರಯೋಗಶೀಲತೆ. ಕುಂದಾಪುರ ಮೂಡುಬಗೆಯ ವಾಗ್ಜೋತಿ ಶಾಲೆಯ ಕಿವುಡ, ಬುದ್ಧಿ ಮಾಂದ್ಯ, ಮೂಗ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಿ ಅವರಿಂದ ಯಕ್ಷಗಾನ ಪ್ರದರ್ಶನ ನಡೆಸಿದ ಯಕ್ಷಗುರು ಮೊಗೆಬೆಟ್ಟು. ದುಡಿಯುವ ಮಕ್ಕಳಿಗೆ, ಅನಾಥ ಮಕ್ಕಳಿಗೆ, ಹೊರ ರಾಜ್ಯದ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಿ ಮಕ್ಕಳ ಯಕ್ಷಗಾನ, ಹವ್ಯಾಸಿಗಳ ಯಕ್ಷಗಾನದಲ್ಲಿ ಕ್ರಾಂತಿಕಾರಕ ನಡೆ.

ಸುಮಾರು 20ಕ್ಕೂ ಹೆಚ್ಚು ಯಕ್ಷಗಾನ ಸಂಸ್ಥೆಗಳ ನಿರ್ದೇಶಕ – ಗುರು. ಈಗಾಗಲೇ ಸಾಮಾಜಿಕ, ಕಾಲ್ಪನಿಕ, ಪೌರಾಣಿಕ, ಐತಿಹಾಸಿಕ, ಜಾನಪದಿಕ. ವಿಭಾಗದಲ್ಲಿ 25 ಸ್ವಯಂ ರಚಿತ ಪ್ರಸಂಗಗಳನ್ನು ಬರೆದ ಛಂದೋಬದ್ಧ ಪ್ರಸಂಗಗಳ ಸಾಹಿತಿ. ಇವರ ಅಗ್ನಿ ವರ್ಷ, ಅಪೂರ್ವ ಅರ್ಧಾಂಗಿ ಜಲವಳ್ಳಿ ವಿದ್ಯಾಧರ ರಾವ್ ಜಲವಳ್ಳಿ ಯವರ ಕಲಾಧರ ಜಲವಳ್ಳಿ ಡೇರೆ ಮೇಳದಲ್ಲಿ ಮೆರೆದಿವೆ.

ಇತ್ತೀಚೆಗೆ ಭಾರತೀಯ ಸೈನಿಕರ ಕುರಿತು ಬರೆದ ಯಕ್ಷಗಾನ ಕಾವ್ಯ ರೂಪಕ- ಯೋಧಧರ್ಮೋ ವರಂ ಕರ್ಮ ಹಾಗೂ ರಾಧಾಕೃಷ್ಣ ನ್ರತ್ಯವೈಭವದ ರಂಗ ಸಖಿ ಸಾಕಷ್ಟು ಸದ್ದು ಮಾಡುತ್ತಿವೆ. ಇನ್ನಿತರ ಯಕ್ಷಗಾನ ಕಥೆಗಾರರ 17 ಪ್ರಸಂಗಗಳಿಗೆ ಪದ್ಯ ರಚನೆ ಮಾಡಿದ್ದಾರೆ. ಪ್ರಸಾದ್ ಕುಮಾರ್ ಮೊಗೆಬೆಟ್ಟು ಇದುವರೆಗೆ ಬರೆದ ಯಕ್ಷಗಾನ ಪದ್ಯ ಗಳ ಸಂಖ್ಯೆ ಬರೋಬ್ಬರೀ 10ಸಾವಿರ ದಾಟಿವೆ. ಮೂಡಲಪಾಯ ಯಕ್ಷಗಾನ ಕಲಾವಿದರಿಗೆ ಪ್ರಸಂಗ ನಿರ್ದೇಶನ ಮಾಡಿದ ಇವರು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಯಕ್ಷಗಾನ ಕಮ್ಮಟ, ಸಭೆ, ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಯಕ್ಷಗಾನ ಆಟ, ತಾಳಮದ್ದಳೆ, ಗಾನ ವೈಭವ ಕಾರ್ಯಕ್ರಮ, ಯಕ್ಷಗಾನ ಶಿಕ್ಷಣದಲ್ಲಿ ಬಿಡುವಿಲ್ಲದ ಕಾಯಕ ಇವರದ್ದು. ಇವರು ರಚಿಸಿದ ಅನೇಕ ಭಾವಗೀತೆಗಳು ಮಂಗಳೂರು ಆಕಾಶವಾಣಿ ಯಲ್ಲಿ ಕದ್ರಿ ಗೋಪಾಲನಾಥ್, ಮೌನೇಶ ಕುಮಾರ್ ಚಾವಣಿ ಸಂಗೀತ ನಿರ್ದೇಶನದಲ್ಲಿ ಪ್ರಸಾರವಾಗಿವೆ. ಈಗಾಗಲೇ 200 ಕ್ಕೂ ಹೆಚ್ಚು ಪ್ರತಿಷ್ಠಿತ ಸನ್ಮಾನ ದೊರಕಿವೆ.

ಸ್ಕಂದ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚೆಗೆ ಶ್ರಂಗೇರಿಯ ರಮೇಶ್ ಬೇಗಾರ್ ನೇತೃತ್ವದ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ಮತ್ತು ಕಾಳಿಂಗ ನಾವಡ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಕಾಳಿಂಗ ನಾವಡ ಪ್ರಶಸ್ತಿ ಇವರಿಗೆ ದೊರಕಿದೆ.

ದಶಾವತಾರಿ, ಸವ್ಯಸಾಚಿ, ಯಕ್ಷ ಅಕ್ಷರ ಸರಸ್ವತಿ, ಗಾನಸರಸ್ವತಿ, ಯಕ್ಷಸಾಹಿತ್ಯ ರತ್ನ, ಕವಿ ಕೋಗಿಲೆ, ಕವಿರತ್ನ.. ಮೊದಲಾದ ಬಿರುದುಗಳು ವಿಶೇಷ ಸನ್ಮಾನಗಳಲ್ಲಿ ಪ್ರಧಾನ ಮಾಡಲಾಗಿದೆ. ಪತ್ನಿ ಶರಾವತಿ, ಪುತ್ರ ಅಮೋಘ, ಪುತ್ರಿ ಆರಾಧ್ಯ ಪುಟ್ಟ ಸಂಸಾರ.

ಯಕ್ಷಗಾನ ಕಲೆಯನ್ನು ಉಸಿರಾಗಿಸಿಕೊಂಡ ಅಪರೂಪದ ಪ್ರತಿಭೆಯಾದ ಮೊಗೆಬೆಟ್ಟು ಅವರು ಜಲವಳ್ಳಿ ವೆಂಕಟೇಶ ರಾವ್ ಅವರನ್ನು ರಂಗ ದಲ್ಲಿ ಕುಣಿಸಿದ್ದಾರೆ.

ಇವರ ರಚನೆಯ ಪ್ರಸಂಗಗಳಲ್ಲಿ ಪಾತ್ರವಾಗಿಸಿದ್ದಾರೆ. ಜಲವಳ್ಳಿ ಮೇಳದಲ್ಲಿ ಮುಖ್ಯ ಪ್ರಸಂಗ ಕರ್ತನಾಗಿಯೂ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನದ ವಿಶೇಷ ಕಲಾಸೇವೆ ಹಾಗೂ ಜಲವಳ್ಳಿ ಕುಟುಂಬದ ಕಲಾಬಾಂಧವ್ಯದಿಂದ ಜಲವಳ್ಳಿ ಪ್ರಶಸ್ತಿ ನ್ಯಾಯೋಚಿತ ಆಯ್ಕೆ. ಅರ್ಹ ಕಲಾವಿದನಿಗೆ ಸಂದ ಸುಯೋಗ್ಯ ಪ್ರಶಸ್ತಿ.

ಬರಹ : ನಾಗರಾಜ ವಂಡ್ಸೆ

Leave A Reply

Your email address will not be published.