ಮಾಯವಾದ ‘ಯಕ್ಷರಂಗ’ದ ಮಾಯಾ ಜಿಂಕೆ : ಪೇತ್ರಿ ಪ್ರಕಾಶ್ಚಂದ್ರ ಜೋಗಿ

0
  • ಪ್ರಸಾದ್ ಮೊಗೆಬೆಟ್ಟು (ಯಕ್ಷಗುರುಗಳು)

ಬಡಗುತಿಟ್ಟಿನ ಶಾಸ್ತ್ರಬದ್ಧ ಯಕ್ಷಗಾನ ಶಿಕ್ಷಣದ ಸಂಪ್ರದಾಯ ಸಾರವನ್ನು ಗಂಭೀರವಾಗಿ ಹೀರಿಕೊಂಡು ಸುಯೋಗ್ಯ ಕಲಾವಿದನಾಗಿ ಯಕ್ಷಗಾನ ಕಲಾಮಾತೆಯ ಸೇವೆಗೈದ ಯುವ ಕಲಾರತ್ನ ಪೇತ್ರಿ ಪ್ರಕಾಶ್ಚಂದ್ರ ಜೋಗಿ (39) ಇನ್ನು ನೆನಪು ಮಾತ್ರ !

ಪೇತ್ರಿಯ ರಘುರಾಮ ಬಳೆಗಾರರ ಸುಪುತ್ರ ಪ್ರಕಾಶ್ ಕಳೆದ ಹದಿನೈದು ವರ್ಷಗಳ ಹಿಂದೆ ಮಿದುಳು ಗಡ್ಡೆಯ ಚಿಕಿತ್ಸೆಗೆ ಒಳಗಾಗಿದ್ದ. ಇದುವರೆಗೆ ಆರೋಗ್ಯ- ಅನಾರೋಗ್ಯದ ನಡುವೆ ಬಾಳಿ ಬದುಕಿದ ಕಲಾವಿದ ಪ್ರಕಾಶ್ ಜೂನ್ 27ರಂದು ಕಾಲಗರ್ಭ ಸೇರಿದ್ದಾರೆ. 1998-99ರ ಅವಧಿಯಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ನೀಲಾವರ ಲಕ್ಷ್ಮಿ ನಾರಾಯಣಯ್ಯ, ಬನ್ನಂಜೆ ಸಂಜೀವ ಸುವರ್ಣ, ಗೋರ್ಪಾಡಿ ವಿಠಲ ಪಾಟೀಲ, ದೇವದಾಸ ರಾವ್, ಸತೀಶ ಕೆದ್ಲಾಯ, ಕ್ರಷ್ಣ ಮೂರ್ತಿ ಭಟ್ ಇವರಲ್ಲಿ ಯಕ್ಷಗಾನ ಶಿಕ್ಷಣ ಪಡೆದ ಪ್ರಕಾಶ್ ಚಂದ್ರ ನನ್ನ ಸಹಪಾಠಿ-ಸಹೋದ್ಯೋಗಿ- ಸನ್ಮಿತ್ರನಾಗಿದ್ದ. ನಾನು, ಜನ್ಸಾಲೆ, ಮಂಜುನಾಥ್ ಕುಲಾಲ್ ಹಾಗೂ ಪ್ರಕಾಶ್ ಒಟ್ಟಾಗಿಯೇ ಕಲಿತವರು. ಹದಿನೈದು ವರ್ಷಗಳ ಮಧುರ ಸ್ನೇಹ ಸಾಹೋದರ್ಯಕ್ಕಿಂತಲೂ ಹೆಚ್ಚು.

ಪ್ರಕಾಶ್ ಜೋಗಿ ಒಳ್ಳೆಯ ನ್ರತ್ಯಪಟು. ಸಂಪ್ರದಾಯ ಬದ್ಧ ಕುಣಿತ, ಅಭಿನಯ, ವಾಕ್ ಶೈಲಿ, ವೇಷಗಾರಿಕೆಯಲ್ಲಿ ಹಳೆ ಕಲಾವಿದರನ್ನು ನೆನಪಿಸುತ್ತಿದ್ದ. ಹಿಡಿಂಬಾ ವಿವಾಹದ ಭೀಮ, ದಮಯಂತಿಯ ಋತುಪರ್ಣ, ಪ್ರಸೇನ, ಬಲರಾಮ, ಕರ್ಣ, ಅರ್ಜುನ. ಹೀಗೆ ಎಲ್ಲಾ ಬಗೆಯ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಪ್ರತಿಭಾವಂತ ಕಲಾವಿದ ಪ್ರಕಾಶ್ಚಂದ್ರ. ಡಾ.ಶಿವರಾಮ ಕಾರಂತರ’ಯಕ್ಷರಂಗ’ ಎಂಬ ವ್ಯವಸಾಯಿ ಮೇಳದ ಕಲಾವಿದ ಪ್ರಕಾಶ್ ದೇಶ- ವಿದೇಶಗಳಲ್ಲಿ ತನ್ನ ಕಲಾಪ್ರತಿಭೆಯನ್ನು ಮೆರೆಸಿದವರು. ಕಾರಂತರ ಯಕ್ಷರಂಗ ಬ್ಯಾಲೆಯ ಪಂಚವಟಿ ಪ್ರಸಂಗದಲ್ಲಿ ಬರುವ ‘ ಮಾಯಾಜಿಂಕೆ’ ಪಾತ್ರವನ್ನು ಪ್ರಕಾಶ್ ಇನ್ನಿಲ್ಲದಂತೆ ಚಿತ್ರಿಸಿದ್ದ. ಆ ನ್ರತ್ಯ, ವೇಷಗಾರಿಕೆ ಅದ್ವಿತೀಯವೇ ಸರಿ.

ಒಬ್ಬ ಉತ್ತಮ ವೇಷಧಾರಿಯಾದ ಗೆಳೆಯ ಪ್ರಕಾಶ್ ಉತ್ತಮ ಮದ್ದಳೆಗಾರನೂ ಹೌದು.ಯೋಗ್ಯ ಗುರುವಾಗಿಯೂ ಗಮನಾರ್ಹ. ರಂಗಜೀವನ ಹಾಗೂ ಜೀವನ ರಂಗದಲ್ಲಿ ಬಣ್ಣ ಬಣ್ಣದ ಹೊಂಗನಸನ್ನು ಹಂಚಿಕೊಳ್ಳುತ್ತಿದ್ದ ಗೆಳೆಯ ಪ್ರಕಾಶ್ ಅವಿವಾಹಿತನಾಗಿಯೇ ಇನ್ನಿಲ್ಲವಾದ.ಬಡಗುತಿಟ್ಟು ಯಕ್ಷಗಾನ ರಂಗಭೂಮಿ ಇವನಿಂದ ಸಾಕಷ್ಟು ನಿರೀಕ್ಷಿಸಿತ್ತು. ನಿರ್ಮಲ ಸ್ನೇಹಕ್ಕೆ ತೋರುಬೆರಳಂತಿದ್ದ ಪ್ರಕಾಶ್ಚಂದ್ರ ಇನ್ನಿಲ್ಲವೆನ್ನಲು ಹ್ರದಯ ಭಾರವಾಗುತ್ತಿದೆ. ಯಕ್ಷಗಾನ ಲೋಕದಲ್ಲಿ ಅಲ್ಪಾವಧಿಯಲ್ಲಿಯೇ ದಿವ್ಯ ಪ್ರತಿಭೆಯ ಚಂದ್ರ ಪ್ರಕಾಶದಲ್ಲಿ ಮಿಂಚಿ- ಮರೆಯಾದ ಗೆಳೆಯ ಪ್ರಕಾಶ್ಚಂದ್ರನ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.

Leave A Reply

Your email address will not be published.