ಕರಾವಳಿಯಲ್ಲಿ ಮೊಳಗಲಿದೆ ಚೆಂಡೆ, ಮದ್ದಲೆಯ ಸದ್ದು : ನವೆಂಬರ್ ನಲ್ಲಿ ಮೇಳಗಳ ತಿರುಗಾಟ ಆರಂಭ !

0

ಮಂಗಳೂರು : ಕೊರೊನಾ ಹೊಡೆತಕ್ಕೆ ಯಕ್ಷಗಾನ ಕಲಾವಿದರು ನಲುಗಿ ಹೋಗಿದ್ದಾರೆ. ಕರಾವಳಿಯಲ್ಲಿ ಕಳೆದ 7 ತಿಂಗಳಿನಿಂದ ಸ್ಥಬ್ದವಾಗಿದ್ದ ಚಂಡೆ, ಮದ್ದಲೆಯ ಸದ್ದು ಮತ್ತೆ ಮಾರ್ಧನಿಸಲಿದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಮೇಳಗಳ ತಿರುಗಾಟ ಆರಂಭಿಸುವುದು ಬಹುತೇಕ ಖಚಿತ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 5,000ಕ್ಕೂ ಮಿಕ್ಕಿದ ಯಕ್ಷಗಾನ ಕಲಾವಿದರಿದ್ದಾರೆ. ಅದ್ರಲ್ಲೂ ಮುಜರಾಯಿ ಇಲಾಖೆಗೆ ಒಳಪಟ್ಟು ಮಂದಾರ್ತಿ, ಕಟೀಲು, ಬಪ್ಪನಾಡು, ಅಮೃತೇಶ್ವರಿ, ಮಾರಣಕಟ್ಟೆ ಹಾಗೂ ಕಮಲಶಿಲೆ ಮೇಳಗಳು ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿವೆ.

ಅಲ್ಲದೇ ವೃತ್ತಿಪರ ಮೇಳಗಳು, ಟೆಂಟಿನ ಮೇಳಗಳು ಕೂಡ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಿವೆ. ಆದರೆ ಕೊರೊನಾ ವೈರಸ್ ಸೋಂಕಿನ ತೀವ್ರತೆಯ ಹಿನ್ನೆಲೆಯಲ್ಲಿ ಕಲಾವಿದರು ಅತಂತ್ರರಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಯಕ್ಷಗಾನ ಮೇಳಗಳ ತಿರುಗಾಟದ ಕುರಿತು ಮಂಗಳೂರಿನಲ್ಲಿ ಸಭೆ ನಡೆಸಲಾಗಿದೆ.

ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಉಜಿರೆ ಅಶೋಕ್ ಭಟ್, ಸೀತಾರಾಮ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಸಭೆಯಲ್ಲಿ ಕಲಾವಿದರ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಕಟೀಲು ಮೇಳ ಈ ಬಾರಿ ನಿಗದಿತ ಸಮಯದಲ್ಲಿಯೇ ಪ್ರದರ್ಶನಕ್ಕೆ ಹೊರಡಲು ಸಿದ್ದವಾಗಿದೆ ಎಂದು ಕಟೀಲು ದೇವಾಲಯದ ಅನುವಂಶಿಕ ಅರ್ಚಕ ಹರಿ ಅಸ್ರಣ್ಣ ತಿಳಿಸಿದ್ದಾರೆ.

ಅಲ್ಲದೇ ಕರಾವಳಿ ಭಾಗದಲ್ಲಿ ಯಾವುದೇ ಮೇಳ ಸ್ಥಗಿತವಾದ್ರೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಹೆಚ್ಚುವರಿ ಮೇಳಗಳನ್ನು ರಚಿಸಲು ಇಲಾಖೆ ಮುಂದಾಗಬೇಕೆಂದು ಮನವಿ ಮಾಡಲಾಗಿದೆ.

ಯಕ್ಷಗಾನ ಕಲಾವಿದರ ನೆರವಿಗೆ ಮುಜರಾಯಿ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಯಕ್ಷಗಾನ ಬಯಲಾಟ ಅಕಾಡೆಮಿ ಮುಂದಾಗಿದ್ದು, ಯಾವುದೇ ಕಲಾವಿದರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಈಗಾಗಲೇ ಎಸ್ ಓಪಿ ಸಿದ್ದಪಡಿಸಿ ನೀಡಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂದಾರ್ತಿ ಮೇಳ ಈಗಾಗಲೇ ಹಲವು ನಿಯಮಗಳನ್ನು ಅಳವಡಿಸಿಕೊಂಡು ಮಳೆಗಾಲದ ಸೇವೆ ಆಟವನ್ನು ಆಡಿಸುತ್ತಿದೆ. ಇನ್ನೂ ಹಲವು ಮೇಳಗಳು ಕಾಲಮಿತಿಯ ಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ ಟೆಂಟಿನ ಮೇಳಗಳ ಕುರಿತು ಇದುವರೆಗೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದರ ಬದುಕಿಗೆ ನೆರವಾಗುವ ಕಾರ್ಯವನ್ನು ಸರಕಾರ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

Leave A Reply

Your email address will not be published.