ಸುಪ್ರೀಂ ಕೋರ್ಟ್ ಬೆನ್ನಲ್ಲೇ, ಗುಜರಾತ್ನಲ್ಲಿ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ
Gujarat: ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಚಪ್ಪಲಿಯನ್ನು ನ್ಯಾಯಾಧೀಶರ ಮೇಲೆ ಎಸೆದ ಘಟನೆಯು ಗುಜರಾತಿನ ಅಹಮದಾಬಾದ್ನಲ್ಲಿರುವ ಸೆಷನ್ಸ್ ನ್ಯಾಯಾಲಯದಲ್ಲಿ ಸಂಭವಿಸಿದೆ.
ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿಗಳ ಮೇಲೆ ಶೂ ಎಸೆದ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡಿದ ಬೆನ್ನಲ್ಲೇ ಗುಜರಾತ್ನಲ್ಲಿ ಈ ಘಟನೆ ಸಂಭವಿಸಿದೆ.
ತಾನು ದಾಖಲು ಮಾಡಿದ ಪ್ರಕರಣದಲ್ಲಿ ನ್ಯಾಯಾಧೀಶರು ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕೋಪಗೊಂಡ ವ್ಯಕ್ತಿಯು ಚಪ್ಪಲಿಯನ್ನು ನ್ಯಾಯಾಧೀಶರಿಗೆ ಎಸೆದಿದ್ದಾನೆ.
ಮೆಟ್ರೋ ನ್ಯಾಯಾಲಯವು ನೀಡಿದ ತೀರ್ಪನ್ನು ಪ್ರಶ್ನಿಸಿ ಆ ವ್ಯಕ್ತಿಯು ಮೇಲ್ಮನವಿ ಸಲ್ಲಿಸಿದ್ದ. ಆದರೆ ಈ ಕೋರ್ಟ್ನಲ್ಲಿ ಮೇಲ್ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ಕೋಪಗೊಂಡ ವ್ಯಕ್ತಿಯು ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ ಎಂದು ಪಿ.ಎಚ್. ಭಾಟಿ ತಿಳಿಸಿದ್ದಾರೆ.
ಈ ಕೃತ್ಯ ಎಸಗುತ್ತಿದ್ದಂತೆಯೇ ನ್ಯಾಯಾಲಯದ ಸಿಬ್ಬಂದಿ ಆತನನ್ನು ಹಿಡಿದರೂ ಸಹ ನ್ಯಾಯಾಧೀಶರು ಆತನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬೇಡಿ, ಆತನನ್ನು ಬಿಟ್ಟು ಬಿಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
Also Read: 2ರ ಮಗ್ಗಿ ಹೇಳಲು ಬಾರದ ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಶಿಕ್ಷಕಿ
ಏನಿದು ಚಪ್ಪಲಿ ಎಸೆತ ಪ್ರಕರಣ ?
1997ರಲ್ಲಿ ನಡೆದ ಪ್ರಕರಣ ಇದಾಗಿದ್ದು ಗುಜರಾತ್ನ ಗೋಮತಿಪು ರ ಎಂಬಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತರಕಾರಿ ಖರೀದಿ ಮಾಡುತ್ತಿದ್ದ ದೂರುದಾರ ವ್ಯಕ್ತಿಯ ಮೇಲೆ ಚಂಡು ತಗುಲಿತ್ತು.
ಇದೇ ವಿಚಾರವಾಗಿ ಆರಂಭಗೊಂಡಿದ್ದ ಮಾತಿನ ಚಕಮಕಿಯು ಬಳಿಕ ದೈಹಿಕವಾಗಿ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿತ್ತು. ಆ ವ್ಯಕ್ತಿ ಗೋಮತಿಪುರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಆಯುಧದಿಂದ ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಿದ್ದ.
ಇದಾದ ಬಳಿಕ ಈಪ್ರಕರಣವನ್ನು 2009ರಲ್ಲಿ ಮೆಟ್ರೋ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿ 2017ರಲ್ಲಿ ತೀರ್ಪು ನೀಡಿದ ಮೆಟ್ರೋ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರ 2027ರಲ್ಲಿ ಸೆಷನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೇಲ್ಮನವಿ ವಜಾಗೊಳಿಸಿದ ಸೆಷನ್ಸ್ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದ ಮೆಟ್ರೋ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ಇದರಿಂದ ಕೋಪಗೊಂಡ ಅರ್ಜಿದಾರ ವ್ಯಕ್ತಿಯು ಜೋರಾಗಿ ಮಾತನಾಡಲು ಆರಂಭಿಸಿದ್ದ. ಆತನನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವಾಗಲೇ ತನ್ನ ಚಪ್ಪಲಿಗಳು ಆತ ನ್ಯಾಯಾಧೀಶರೆಡೆ ಎಸೆದಿದ್ದಾನೆ.
Also Read: ದಾಂಪತ್ಯ ಕಲಹ : ಪುತ್ರಿಯ ಎದುರಲ್ಲೇ ಗುಂಡಿಕ್ಕಿ ಪತ್ನಿಯನ್ನು ಕೊಂದ ಪತಿ
ಕೂಡಲೇ ಆತನನ್ನು ಪೊಲೀಸರು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಿಡಿದುಕೊಂಡಿದ್ದಾರೆ. ಆದರೆ ಈತನ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಧೀಶರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈತನ ಮೇಲೆ ಯಾವುದೇ ದೂರು ದಾಖಲಿಸಿಲ್ಲ.
ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ನಲ್ಲಿಯೂ ಶೂ ದಾಳಿ ಪ್ರಕರಣ ನಡೆದಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.



