ದೀಪಾವಳಿ 2025: ಮಕ್ಕಳ ಕೈಗೆ ಪಟಾಕಿ ಕೊಡುವ ಮುನ್ನ ಇರಲಿ ಎಚ್ಚರ!

Firecracker Safety Tips: ದೀಪದಿಂದ ದೀಪ ಬೆಳಗಿಸುವ ಹಬ್ಬ ದೀಪಾವಳಿ. ಇದು ಎಲ್ಲ ವಯಸ್ಸಿನವರ ಮುಖದಲ್ಲಿಯೂ ನಗುವಿನ ಬೆಳಕು ಚೆಲ್ಲುವ ಹಬ್ಬ.

ಎಲ್ಲರೂ ಒಂದಾಗಿ ಸಂಭ್ರಮದಿಂದ ಆಚರಿಸುವ ದೀಪಾವಳಿಯಲ್ಲಿ ದೀಪಗಳ ಜೊತೆಗೆ ಪಟಾಕಿಯ ಸದ್ದು ಜೋರಾಗಿಯೇ ಕೇಳಿಬರುತ್ತದೆ.

ದೀಪಾವಳಿಗೆ ಕೆಲವು ದಿನಗಳು ಇರುವಾಗಲೇ ಯಾವ ಪಟಾಕಿ ಖರೀದಿಸಬೇಕೆಂಬ ಚರ್ಚೆ ಮಕ್ಕಳ ಗುಂಪಿನಲ್ಲಿ ಸಾಮಾನ್ಯವಾಗಿರುತ್ತದೆ.

ಮಕ್ಕಳಿಗೆ ಪಟಾಕಿ ಸಿಡಿಸುವುದೆಂದರೆ ಎಲ್ಲಿಲ್ಲದ ಸಂತೋಷ. ಮನೆಯಲ್ಲಿ ಪಟಾಕಿ ಕೊಡಿಸೆಂದು ದಂಬಾಲು ಬೀಳುವ ಮಕ್ಕಳು ಇದ್ದಾರೆ.

ಆದರೆ ಹಬ್ಬದ ಉತ್ಸಾಹ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಪೋಷಕರು ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಏಕೆಂದರೆ ಸಣ್ಣ ತಪ್ಪುಗಳು ಕೂಡ ನಿಮ್ಮ ಮುದ್ದು ಮಗುವಿನ ಜೀವಕ್ಕೆ ಗಂಭೀರ ಅಪಾಯವನ್ನುಂಟುಮಾಡಬಹುದು.

ಪ್ರತಿ ವರ್ಷ, ದೀಪಾವಳಿಯ ಸಮಯದಲ್ಲಿ ಪಟಾಕಿಗಳಿಂದ ಉಂಟಾಗುವ ಅನಾಹುತಗಳ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬರುತ್ತದೆ.

ಪ್ರತಿ ವರ್ಷದಂತೆ, ಈ ವರ್ಷವೂ ದೀಪಾವಳಿಗೆ ಒಂದು ವಾರ ಮೊದಲು ಪಟಾಕಿಗಳ ಶಬ್ದ ಕೇಳಿಬರುತ್ತಿದೆ. ಆದ್ದರಿಂದ, ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಒಂದಿಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ.

ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಆನಂದ ಪಡುವ ಮಕ್ಕಳನ್ನು ಕಾಳಜಿ ಮಾಡುವುದು ಪೋಷಕರ ಹೆಗಲ ಮೇಲೆ ಇರುತ್ತದೆ.

ಆದ್ದರಿಂದ . ಪೋಷಕರು ತಮ್ಮ ಮಕ್ಕಳಿಗೆ ಪಟಾಕಿಗಳನ್ನು ತಂದುಕೊಂಡುವ ಮೊದಲು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ.

ದೀಪಾವಳಿ ಪಟಾಕಿಗಳನ್ನು ಹಚ್ಚುವ ಮೊದಲು ಪೋಷಕರು ವಹಿಸಬೇಕಾದ ಎಚ್ಚರಿಕೆಗಳು

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ

ಪಟಾಕಿ ಸಿಡಿಸುವ ಸಮಯದಲ್ಲಿ ನಿಮ್ಮ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ. ಯಾವುದೇ ರೀತಿಯ ಅಹಿತಕರ ಘಟನೆಯನ್ನು ತಪ್ಪಿಸಲು ಮತ್ತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು, ಪೋಷಕರು ಯಾವಾಗಲೂ ಮಕ್ಕಳ ಜೊತೆಯಲ್ಲಿಯೇ ಇರುವುದು ಮುಖ್ಯ.

ಪೋಷಕರ ಅಥವಾ ಹಿರಿಯರ ಮೇಲ್ವಿಚಾರಣೆಯಲ್ಲಿ ಮಕ್ಕಳು ಪಟಾಕಿ ಹಚ್ಚುತ್ತಿದ್ದಾರೆ ಎಂಬುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ.

ಪಟಾಕಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ

ಪಟಾಕಿ ಹಚ್ಚಿದ ತಕ್ಷಣ ಮಕ್ಕಳಿಗೆ ಹಿಂದೆ ಸರಿಯುವುದನ್ನು ಕಲಿಸಿ. ರಾಕೆಟ್ ಅಥವಾ ಸ್ಪಾರ್ಕ್ಸಗಳಂತಹ ಪಟಾಕಿಗಳನ್ನು ಹಚ್ಚುವಾಗ ಕನಿಷ್ಠ 5-10 ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ.

ಇದನ್ನೂ ಓದಿ: ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ

ಕಾಟನ್‌ ಉಡುಪುಗಳನ್ನು ಧರಿಸಿ

ಪಟಾಕಿ ಹಚ್ಚುವಾಗ ಕಾಟನ್‌ ಬಟ್ಟೆಗಳನ್ನು ಧರಿಸಿ. ಬೆಂಕಿ ಹೊತ್ತಿಕೊಳ್ಳಬಹುದಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಉದಾಹರಣೆಗೆ ನೈಲಾನ್ ಬಟ್ಟೆಗಳು.

ಪಟಾಕಿಗಳ ಕಿಡಿಗಳಿಂದ ಮಕ್ಕಳನ್ನು ರಕ್ಷಿಸಲು ಹತ್ತಿ ಬಟ್ಟೆಗಳು, ಉದ್ದ ತೋಳಿನ ಶರ್ಟ್‌ಗಳು ಮತ್ತು ಮುಚ್ಚಿದ ಟೋ ಬೂಟುಗಳನ್ನು ಧರಿಸಿ.

ಸರಿಯಾದ ಸ್ಥಳವನ್ನು ಆರಿಸಿ

ಯಾವಾಗಲೂ ಪಟಾಕಿಗಳನ್ನು ಅಂಗಳ ಅಥವಾ ಉದ್ಯಾನವನದಂತಹ ತೆರೆದ, ಸಮತಟ್ಟಾದ ಪ್ರದೇಶದಲ್ಲಿ ಹಚ್ಚಿ. ಮರಗಳು, ವಿದ್ಯುತ್ ತಂತಿಗಳು ಅಥವಾ ಸುಡುವ ವಸ್ತುಗಳ (ಪೆಟ್ರೋಲ್‌ ಅಥವಾ ಗ್ಯಾಸ್‌ ಸಿಲಿಂಡರ್‌ಗಳಂತಹ) ಬಳಿ ಪಟಾಕಿಗಳನ್ನು ಹಚ್ಚಬೇಡಿ.

ಪ್ರಥಮ ಚಿಕಿತ್ಸಾ ಕಿಟ್ ಸಿದ್ಧವಾಗಿಡಿ

ಪಟಾಕಿಗಳನ್ನು ಹಚ್ಚುವಾಗ, ಬರ್ನ್ ಕ್ರೀಮ್ ಮತ್ತು ಬ್ಯಾಂಡೇಜ್‌ಗಳಂತಹ ವಸ್ತುಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಹತ್ತಿರದಲ್ಲಿ ಇರಿಸಿಕೊಳ್ಳಿ.

ತಣ್ಣೀರಿನಿಂದ ತುಂಬಿದ ಬಕೆಟ್ ಅನ್ನು ಸಹ ಹತ್ತಿರದಲ್ಲಿ ಇಟ್ಟುಕೊಳ್ಳಿ.

ಪಟಾಕಿಗಳಿಂದ ಮಗುವಿನ ಕೈ ಅಥವಾ ಕಾಲುಗಳಲ್ಲಿ ಸ್ವಲ್ಪ ಸುಟ್ಟ ಗಾಯವಾದರೆ ತಕ್ಷಣ ಆ ಜಾಗವನ್ನು 10-15 ನಿಮಿಷಗಳ ಕಾಲ ತಣ್ಣೀರಿನಿಂದ ತೊಳೆಯಿರಿ ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಇದು ನೆನಪಿರಲಿ

ಮಕ್ಕಳಿಗೆ ಹೆಚ್ಚು ಪಟಾಕಿಗಳನ್ನು ಸಿಡಿಸಲು ಬಿಡಬೇಡಿ. ಶಬ್ದ ಮತ್ತು ಹೊಗೆ ಕಡಿಮೆ ಇರುವ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಆರಿಸಿಕೊಳ್ಳಿ. ಪಟಾಕಿಗಳ ಅಪಾಯಗಳು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಮಕ್ಕಳಿಗೆ ಮುಂಚಿತವಾಗಿ ತಿಳುವಳಿಕೆ ನೀಡಿ.

ಯಾವುದೇ ಅಪಘಾತ ಸಂಭವಿಸಿದಲ್ಲಿ, ತಕ್ಷಣ ಪ್ರಥಮ ಚಿಕಿತ್ಸೆ ನೀಡಿ, ಮನೆಯಲ್ಲಿಯೇ ಚಿಕಿತ್ಸೆ ಮಾಡಲು ಮುಂದಾಗಬೇಡಿ. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ದೀಪಾವಳಿಗೆ ಈ 5 ವಸ್ತುಗಳನ್ನು ಖಂಡಿತ ಖರೀದಿಸಿ: ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿಯೇ ಸದಾ ನೆಲೆಸುತ್ತಾಳೆ

(Deepavali 2025 Beware of giving firecrackers to your lovely child firecracker safety tips)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories