ಹೊಸಕೋಟೆಯಲ್ಲಿ ಭ್ರೂಣ ಹತ್ಯೆ : ಫಾಕ್ಸ್‌ಕಾನ್ ಕಂಪೆನಿಗೆ ಸಂಕಷ್ಟ
Foxconn police notice : ಬೆಂಗಳೂರು : ಭಾರತದ ಅತೀ ದೊಡ್ಡ ಐಪೋನ್ ತಯಾರಿಕಾ ಕಂಪೆನಿಯಾಗಿರುವ ಫಾಕ್ಸ್‌ಕಾನ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಹೊಸಕೋಟೆಯಲ್ಲಿರುವ ಕಂಪೆನಿಯ ಮಹಿಳಾ ನೌಕರರಿಗೆ ವಸತಿ ಸೌಕರ್ಯ ಕಲ್ಪಿಸಿರುವ ಅಪಾರ್ಟ್ಮಂಟ್‌ನಲ್ಲಿ ಭ್ರೂಣ ಹತ್ಯೆ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತು ಪೊಲೀಸರು ಕಂಪೆನಿಗೆ ನೋಟೀಸ್ ಜಾರಿ ಮಾಡಿದ್ದು, 2100 ನೌಕಕರ ವಿವರ ಕೇಳಿದ್ದಾರೆ.
ಬೆಂಗಳೂರು ಹೊರವಲಯದ ಸೂಲಿಬೆಲೆ ಪೊಲೀಸ್ ಠಾಣೆಯ ಪೊಲೀಸರು ಫಾಕ್ಸ್‌ಕಾನ್ ಕಂಪೆನಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2025ರ ಮಾರ್ಚ್ ತಿಂಗಳಿನಲ್ಲಿ ಅಪಾರ್ಟ್‌ಮೆಂಟ್‌ನ ಒಳಚರಂಡಿ ನಿರ್ವಹಣೆಯ ಕಾರ್ಯ ಮಾಡುವ ವೇಳೆಯಲ್ಲಿ ಗಂಡು ಭ್ರೂಣ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 8 ರಂದು ತೈವಾನ್ ಮೂಲದ ಫಾಕ್ಸ್‌ಕಾನ್ ಅಕಾ ಹೊನ್ ಹೈ ಟೆಕ್ನಾಲಜಿ ಗ್ರೂಪ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ನ್ಯೂಸ್‌ನೆಕ್ಸ್ಟ್‌ಗೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರತಿ ಲಭ್ಯವಾಗಿದೆ.
ಪೊಲೀಸರು ಈಗಾಗಲೇ ಫಾಕ್ಸ್‌ಕಾನ್ ಕಂಪೆನಿಯ ಹೆಡ್ ಅರುಣ್ ಅವರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 2100 ಉದ್ಯೋಗಿಗಳ ವಿವರ ನೀಡುವಂತೆ ಕೇಳಿದೆ.
ಫಾಕ್ಸ್‌ಕಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ವಾಸವಿರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಗಂಡು ಭ್ರೂಣ ಪತ್ತೆಯಾದ ಹಿನ್ನೆಯಲ್ಲಿ ಬಿಸಿಡಿ ಕಂಪನಿ ಮೇಲ್ವಿಚಾರಕ ಕೆ.ಎಸ್ ಮುರಳೀಧರ್ ಎಂಬವರು ದೂರು ಸಲ್ಲಿಸಿದ್ದರು.
ಇದನ್ನೂ ಓದಿ : ಫ್ಯಾಕ್ಸ್‌ಕಾನ್ ಕಂಪೆನಿಯಿಂದ ಕನ್ನಡಿಗರಿಗೆ ವಂಚನೆ : ಕರವೇ ಪ್ರತಿಭಟನೆ
ಹೊಸಕೋಟೆಯ ಕಂಬಳಿಪುರ ಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಮಾರ್ಚ್ 14ರಂದು ಬೆಳಗ್ಗೆ 10:45ರ ಸುಮಾರಿಗೆ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಒಂದು ಗಂಡು ಭ್ರೂಣ ಪತ್ತೆಯಾಗಿತ್ತು. ಭ್ರೂಣವನ್ನು ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಇಡಲಾಗಿತ್ತು. ಈ ಭ್ರೂಣ ಪತ್ತೆಯಾಗುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು.
ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಗರ್ಭಪಾತ ಮಾಡಿ ಅದನ್ನು ಮರೆಮಾಚುವ ಉದ್ದೇಶದಿಂದ ಒಳಚರಂಡಿ ವ್ಯವಸ್ಥೆ ಮೂಲಕ ಭ್ರೂಣವನ್ನು ವಿಲೇವಾರಿ ಮಾಡಲು ಆರೋಪಿಗಳು ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ ಫಾಕ್ಸ್‌ಕಾನ್ ಕಂಪನಿಯ ಸಿಬ್ಬಂದಿಯೇ ಈ ಪ್ರಕರಣದ ಪ್ರಮುಖ ರೂವಾರಿ ಆಗಿರಬಹುದು ಎಂದು ಶಂಕಿಸಲಾಗಿದೆ.
ಮಾರ್ಚ್‌ನಲ್ಲಿ ಪೊಲೀಸರು ಮೊದಲು ಬಿಸಿಡಿ ಕಂಪನಿಗೆ ನೋಟಿಸ್ ಜಾರಿ ಮಾಡಿ, ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಎಲ್ಲಾ 2,100 ಮಹಿಳಾ ಉದ್ಯೋಗಿಗಳ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಿದರು. ಆದರೆ ಕಂಪನಿಯ ಪ್ರತಿನಿಧಿ ಹರೀಂದ್ರನಾಥ್ ಕೆ ಎನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಬಿಸಿಡಿ ಅಗತ್ಯ ಮಾಹಿತಿಯನ್ನು ಹೊಂದಿಲ್ಲ. ಹೀಗಾಗಿ ಫಾಕ್ಸ್‌ಕಾನ್ ಕಂಪೆನಿಯಿಂದಲೇ ಪಡೆಯುವಂತೆ ಸೂಚಿಸಿದ್ದರು.
ಇದರ ಬೆನ್ನಲ್ಲೇ ಪೊಲೀಸರು ಫಾಕ್ಸ್‌ಕಾನ್ ಕಂಪನಿಯ ಮುಖ್ಯಸ್ಥ ಅರುಣ್ ಅವರಿಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದರು. ಅಗತ್ಯ ದಾಖಲೆಗಳ ಜೊತೆಗೆ ಉದ್ಯೋಗಿಗಳ ಸಂಪೂರ್ಣ ವಿವರಗಳ ಜೊತೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿದರು.
ಫಾಕ್ಸ್‌ಕಾನ್ ಕಂಪೆನಿಯಿಂದ ಮಾಹಿತಿಯನ್ನು ಪಡೆದ ನಂತರದಲ್ಲಿ ಪೊಲೀಸರು ಕಂಪೆನಿಯ ನೌಕರರು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
Bengaluru police serve notice I phone Manufacture company Foxconn in foeticide case, asks details of 2,100 workers



