ಮಂಗಳೂರಿನಲ್ಲಿ ವರುಣನ ಅಟ್ಟಹಾಸ -ಭೀಕರ ದುರಂತ, ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಬಲಿ
mangaluru heavy rain nagori landslide : ಮಂಗಳೂರು ನಗರದ ಕಂಕನಾಡಿ ಸಮೀಪದಲ್ಲಿರುವ ನಾಗುರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಂತಾ ( 46 ವರ್ಷ).ಅನಾಮಿಕಾ ಚೌರಾಸಿಯ (8 ವರ್ಷ) ಹಾಗೂ ಪರಿ ( 4 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಂಗಳೂರು: ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬಾರೀ ದುರಂತವೊಂದು ಸಂಭವಿಸಿದೆ. ಮನೆಯ ಮೇಲೆ ಗುಡ್ಡ ಕುಸಿತ ಉಂಟಾಗಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಮನೆಯ ಮೂವರು ಸಾವನ್ನಪ್ಪಿದ್ದಾರೆ.
ಮಂಗಳೂರು ನಗರದ ಕಂಕನಾಡಿ ಸಮೀಪದಲ್ಲಿರುವ ನಾಗುರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಂತಾ ( 46 ವರ್ಷ).ಅನಾಮಿಕಾ ಚೌರಾಸಿಯ (8 ವರ್ಷ) ಹಾಗೂ ಪರಿ ( 4 ವರ್ಷ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತಪಟ್ಟವರು ಬಿಹಾರ ಮೂಲದವರಾಗಿದ್ದು, ಕಟ್ಟಡ ನಿರ್ಮಾಣದ ಕಾಮಗಾರಿಗಾಗಿ ಮಂಗಳೂರಿಗೆ ಬಂದಿದ್ದರು. ನಾಗುರಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಬುಧವಾರ ಮುಂಜಾನೆ ಸುಮಾರು 4:45 ರಿಂದ 5:00 ಗಂಟೆಯ ಅವಧಿಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ನಾಗುರಿಯ ಮರಿಯಾಲ್ ಹೌಸ್ ಬಳಿ ಎತ್ತರದ ಪ್ರದೇಶದಲ್ಲಿದ್ದ ಕಾಂಪೌಂಡ್ ಗೋಡೆಯು ನಿರಂತರ ಮಳೆಗೆ ಸಂಪೂರ್ಣವಾಗಿ ಜರ್ಜರಿತಗೊಂಡು, ಕೆಳಗಡೆ ಇದ್ದ ನಾಲ್ಕು ಬಾಡಿಗೆ ಮನೆಗಳ ಮೇಲೆ ಧರೆ ಸಹಿತ ಕುಸಿದು ಬಿದ್ದಿದೆ. ಪರಿಣಾಮವಾಗಿ ಮನೆಗಳ ಹಿಂಭಾಗದ ಗೋಡೆಗಳು ಸಂಪೂರ್ಣ ಕೊಚ್ಚಿಹೋಗಿ, ಮನೆಯೊಳಗಿದ್ದವರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು.
ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಬಿಹಾರ ಮೂಲದ ಲಾಲಬಾಬು (37 ವರ್ಷ), ಅವರ ಪತ್ನಿ ಇಂದು (34 ವರ್ಷ) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳನ್ನು ತಕ್ಷಣವೇ ರಕ್ಷಿಸಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಮತ್ತೊಂದು ಮನೆಯಲ್ಲಿದ್ದ ಬಾಲಕೃಷ್ಣ ಹಾಗೂ ಪತ್ನಿ ಶಾಂತಾ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಅಗ್ನಿಶಾಮಕ ದಳ, ಎನ್ಡಿಆರ್ಎಫ್ (NDRF) ಹಾಗೂ ಎಸ್ಡಿಆರ್ಎಫ್ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದಲೇ ಅತಿಯಾದ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಗರದ ಹಲವು ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
mangaluru heavy rain nagori landslide three dead family members trapped

