Lesbian Mother: ಸಲಿಂಗಿ ತಾಯಿಯಿಂದಲೇ ಮಗುವಿನ ಹತ್ಯೆ: ಪ್ರೇಯಸಿಯ ಸಮೇತ ಬಂಧನ

ಕೃಷ್ಣಗಿರಿ (ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ತೀವ್ರ ಆಘಾತಕಾರಿ ಘಟನೆ ವರದಿಯಾಗಿದೆ. ಐದು ತಿಂಗಳ ಹಸುಗೂಸಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಮತ್ತು ಆಕೆಯ ಸಲಿಂಗಿ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಕೆಲಮಂಗಲಂ ಸಮೀಪದ ಚಿನ್ನಟ್ಟಿ ಗ್ರಾಮದ ಭಾರತಿ (25) ಎಂಬ ಮಹಿಳೆ, ತನ್ನ ಪತಿ ಸುರೇಶ್ ಅವರ ಅನುಮಾನದ ನಂತರ ಈ ಕೃತ್ಯ ಬೆಳಕಿಗೆ ಬಂದಿದೆ. ಭಾರತಿ ತನ್ನ ಸಲಿಂಗಿ ಪ್ರೇಯಸಿ ಸುಮಿತ್ರಾ (22) ಜೊತೆ ಸಂಬಂಧ ಹೊಂದಿದ್ದರು. ಇದರಿಂದಾಗಿ ದಂಪತಿ ನಡುವೆ ನಿರಂತರ ಕಲಹ ನಡೆಯುತ್ತಿತ್ತು.
ಪೊಲೀಸರ ತನಿಖೆಯ ಪ್ರಕಾರ, ನವೆಂಬರ್ 2 ರಂದು, ಸುರೇಶ್ ಮತ್ತು ಇತರೆ ಕುಟುಂಬ ಸದಸ್ಯರು ಕೆಲಸಕ್ಕೆ ಹೋದಾಗ, ಭಾರತಿ ತನ್ನ ಐದು ತಿಂಗಳ ಮಗ ಧ್ರುವನ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಮಗುವಿನ ಸಾವು ಉಸಿರುಗಟ್ಟುವಿಕೆಯಿಂದ ಆಗಿದೆ ಎಂದು ಕುಟುಂಬ ಸದಸ್ಯರನ್ನು ನಂಬಿಸಿ ಅಂತ್ಯಕ್ರಿಯೆಯನ್ನೂ ಮಾಡಿಸಿದ್ದಳು.
ಪತಿಯ ದೂರಿನಿಂದ ಬಯಲಾಯ್ತು ಸತ್ಯ:
ಆದರೆ, ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿ ಸುರೇಶ್ ಅವರು ಕೆಲಮಂಗಲಂ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ, ಭಾರತಿ, ಸುಮಿತ್ರಾಳ ಸೂಚನೆಯ ಮೇರೆಗೆ ಮಗುವನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.
ಮಗುವಿನ ಸಾವಿನ ನಂತರ ಭಾರತಿ, ಸುಮಿತ್ರಾಳ ಮೊಬೈಲ್‌ಗೆ ಮಗುವಿನ ಫೋಟೋ ಜೊತೆಗೆ ಕೊಲೆ ಮಾಡಿರುವುದಾಗಿ ಸಂದೇಶ ಕಳುಹಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಸಲಿಂಗಿ ಪ್ರೇಯಸಿಯ ನಿಕಟವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಮಗುವಿನ ದೇಹವನ್ನು ಶುಕ್ರವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.



