ಬಿಎಂಟಿಸಿ ಬಸ್​ನಲ್ಲಿ ಸಾರಿಗೆ ಸಚಿವರಿಂದ ರಿಯಾಲಿಟಿ ಚೆಕ್​ : ಮಾಸ್ಕ್​ ಧರಿಸಿ ಫೀಲ್ಡಿಗಿಳಿದ ಬೈರತಿ ಸುರೇಶ್​ರಿಗೆ ಶಾಕ್

ಸಾಮಾನ್ಯ ಪ್ರಯಾಣಿಕರ ಕಷ್ಟಗಳನ್ನು ಖುದ್ದಾಗಿ ಅರಿಯುವ ಉದ್ದೇಶದಿಂದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾಜಧಾನಿಯ ಬಿಎಂಟಿಸಿ ಬಸ್ಸುಗಳಲ್ಲಿ ಅನಿರೀಕ್ಷಿತ ರಿಯಾಲಿಟಿ ಚೆಕ್ ನಡೆಸಿದ್ದಾರೆ.

ಬೆಂಗಳೂರು: ಸಾಮಾನ್ಯ ಪ್ರಯಾಣಿಕರ ಕಷ್ಟಗಳನ್ನು ಖುದ್ದಾಗಿ ಅರಿಯುವ ಉದ್ದೇಶದಿಂದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾಜಧಾನಿಯ ಬಿಎಂಟಿಸಿ ಬಸ್ಸುಗಳಲ್ಲಿ ಅನಿರೀಕ್ಷಿತ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಯಾವುದೇ ಅಧಿಕಾರಿಗಳಿಗೂ ಮುನ್ಸೂಚನೆ ನೀಡದೆ, ಮುಖಕ್ಕೆ ಮಾಸ್ಕ್ ಧರಿಸಿ ಗುರುತು ಸಿಗದಂತೆ ಜಯಮಹಲ್ ಮತ್ತು ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್‌ಗಳಲ್ಲಿ ಅವರು ಸಂಚರಿಸಿದರು. ಜನದಟ್ಟಣೆಯ ನಡುವೆ ಸಾಮಾನ್ಯರಂತೆ ನಿಂತುಕೊಂಡೇ ಪ್ರಯಾಣಿಸಿದ ಸಚಿವರಿಗೆ ಸಾರಿಗೆ ಸಿಬ್ಬಂದಿಯ ಬೇಜವಾಬ್ದಾರಿತನ ನೇರವಾಗಿ ದರ್ಶನವಾಗಿದೆ.

ಭೂಪಸಂದ್ರದಿಂದ ಹೆಬ್ಬಾಳಕ್ಕೆ ಹೋಗುವ ಬಸ್ ಹತ್ತಿದ ಸಚಿವರು ಎರಡು ಟಿಕೆಟ್‌ಗಾಗಿ ನಿರ್ವಾಹಕನಿಗೆ ನೂರು ರೂಪಾಯಿ ನೋಟು ನೀಡಿದ್ದಾರೆ. ಆದರೆ ನಿರ್ವಾಹಕನು ನಿಯಮದಂತೆ ಬಾಕಿ ಹಣ ಕೊಡುವ ಬದಲು, ಸಚಿವರಿಗೆ ಹನ್ನೆರಡು ರೂಪಾಯಿ ಚಿಲ್ಲರೆ ನೀಡುವಂತೆ ಒತ್ತಾಯಿಸಿದ್ದಾನೆ. ಸಚಿವರು ಮಾಸ್ಕ್ ಧರಿಸಿದ್ದರಿಂದ ಗುರುತು ಹಿಡಿಯದ ಆತ, ತಮ್ಮ ಬಳಿ ಚಿಲ್ಲರೆ ಇಲ್ಲವೆಂದಾಗ ತಕ್ಷಣವೇ ಬಸ್‌ನಿಂದ ಕೆಳಗಿಳಿಯುವಂತೆ ಗಡುಸಾಗಿ ತಾಕೀತು ಮಾಡಿದ್ದಾನೆ. ಕೊನೆಗೆ ಮಾಸ್ಕ್ ತೆಗೆದಾಗ ಎದುರಿಗಿದ್ದದ್ದು ಸಾರಿಗೆ ಸಚಿವರೇ ಎಂದು ತಿಳಿದು ಆತ ಕ್ಷಮೆಯಾಚಿಸಿದ್ದಾನೆ. ಆದರೆ ಸಾಮಾನ್ಯ ಜನರಿಗೂ ಇದೇ ರೀತಿ ಕಿರುಕುಳ ನೀಡುತ್ತಿರುವುದನ್ನು ಅರಿತ ಸಚಿವರು, ನಿರ್ವಾಹಕನ ವಿರುದ್ಧ ಶಿಸ್ತುಕ್ರಮಕ್ಕೆ ಸ್ಥಳದಲ್ಲೇ ಸೂಚಿಸಿದರು.

ಈ ರಿಯಾಲಿಟಿ ಚೆಕ್ ವೇಳೆ ಚಾಲಕರು ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ ಇರುವುದು, ಅತಿ ವೇಗದ ಚಾಲನೆ ಮತ್ತು ಪ್ರಯಾಣಿಕರಿಗೆ ಟಿಕೆಟ್ ನೀಡುವಾಗ ಬಾಕಿ ಚಿಲ್ಲರೆ ಕೊಡದೆ ಸತಾಯಿಸುವ ಗಂಭೀರ ಲೋಪಗಳು ಸಚಿವರ ಗಮನಕ್ಕೆ ಬಂದಿವೆ. ಸಾರ್ವಜನಿಕರೊಂದಿಗೆ ಅತ್ಯಂತ ನಿರ್ಲಕ್ಷ್ಯ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಇತರೆ ಚಾಲಕರು ಮತ್ತು ನಿರ್ವಾಹಕರನ್ನು ಸ್ಥಳದಲ್ಲೇ ಅಮಾನತುಗೊಳಿಸುವಂತೆ ಸಚಿವರು ಹಿರಿಯ ಅಧಿಕಾರಿಗಳಿಗೆ ಕಡಕ್ ನಿರ್ದೇಶನ ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಇಂತಹ ದಿಢೀರ್ ತಪಾಸಣೆಗಳು ಮುಂದೆಯೂ ಮುಂದುವರಿಯಲಿವೆ ಎಂದು ಅವರು ಎಚ್ಚರಿಸಿದ್ದಾರೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »