ಬಂಟ್ವಾಳದ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ ₹1.16 ಕೋಟಿ ವಂಚಿಸಿದ ಖದೀಮರು..!
Digital Arrest Scam: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಜಾಲದ ಮೂಲಕ ಅಮಾಯಕರನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
ಇದೇ ರೀತಿಯ ಪ್ರಕರಣವೊಂದು ಬಂಟ್ವಾಳದಲ್ಲಿಯೂ ಇದೀಗ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರಿಗೆ ವಾಟ್ಸಾಪ್ ಕರೆ ಮಾಡಿದ ವಂಚಕರು ಆಕೆಗೆ ಬೆದರಿಕೆ ಹಾಕಿ ಬರೋಬ್ಬರಿ 1.16 ಕೋಟಿ ರೂಪಾಯಿ ವಂಚಿಸಿದ್ದು ಈ ಸಂಬಂಧ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 24ರಂದು ಈ ಘಟನೆ ಸಂಭವಿಸಿದ್ದು ಮಹಿಳೆ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಮುನ್ನೆಲೆಗೆ ಬಂದಿದೆ. ಮಹಿಳೆಯು ಮನೆಯಲ್ಲಿದ್ದ ಸಂದರ್ಭದಲ್ಲಿ ಟೆಲಿ ಕಮ್ಯೂನಿಕೇಷನ್ ಡಿಪಾರ್ಟ್ನಿಂದ ವಿಡಿಯೋ ಕಾಲ್ ಮಾಡಿದ್ದೇವೆ ಎಂದು ವಂಚಕರು ನಂಬಿಸಿದ್ದರು.
ಬಳಿಕ ಮಹಿಳೆಗೆ ವಿಡಿಯೋ ಕಾಲ್ ಮೂಲಕ ಬೆದರಿಕೆಯೊಡ್ಡಿದ್ದ ಸೈಬರ್ ವಂಚಕರು ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಹಾಗೂ ಪಾನ್ಕಾರ್ಡ್ ಬಳಸಿ ಮೊಬೈಲ್ ಸಿಮ್ ಖರೀದಿ ಮಾಡಿ ದೆಹಲಿಯಲ್ಲಿ ಸಾರ್ವಜನಿಕರಿಗೆ ಜಾಹೀರಾತು ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ನಂಬಿಸಿದ್ದಾರೆ.
ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ಮಹಿಳೆಗೆ ವಿಡಿಯೋ ಕರೆ ಮಾಡುತ್ತಲೇ ಬಂದ ವಂಚಕರು ನಿಮ್ಮ ಮೇಲೆ ಕಾಂಬೋಡಿಯಾ ಮತ್ತು ಮಂಗೋಲಿಯಾ ದೇಶಗಳಿಗೆ ಮಕ್ಕಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗಾಗಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ವಂಚಕರು ಮಹಿಳೆಗೆ ಬೆದರಿಸಿದ್ದರು.
ಇದನ್ನೂ ಓದಿ: ಬಹುಕೋಟಿ ವಂಚನೆ ಪ್ರಕರಣ : ಮಂಗಳೂರಿನ ರೋಷನ್ ಸಲ್ಮಾನರ ₹2.85 ಕೋಟಿ ಆಸ್ತಿ ಮುಟ್ಟುಗೋಲು
ಮಹಿಳೆಯನ್ನು ವಾಟ್ಸಾಪ್ ಕರೆ ಮೂಲಕವೇ ಬಂಧಿಸಿದಂತೆ ನಟಿಸಿದ ವಂಚಕರು ಬಳಿಕ ತನಿಖೆ ಆರಂಭಿಸಿದ್ದರು. ತನಿಖೆಯ ಸಂದರ್ಭದಲ್ಲಿ ನೀವು ಹಣ ನೀಡಿದರೆ ನಿಮ್ಮನ್ನು ಈ ಕೇಸ್ಗಳಿಂದ ಬಚಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಹಣ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿದುಬಂದಿದೆ.



