ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್ ಎಫೆಕ್ಟ್ : ನೆಟ್ವರ್ಕ್ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು
Jail Jammer Effect : ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್ ರೌಡಿಗಳು, ಉಗ್ರಗಾಮಿಗಳು ಖುಲ್ಲಂಖುಲ್ಲಾ ಮೊಬೈಲ್ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಮಂಗಳೂರಿನ ಕಾರಾಗೃಹದ ಕತೆ ಬೇರೆಯೇ ಆಗಿದೆ.
ಇಲ್ಲಿ ಜೈಲಿನ ಹೊರಗೆ ಓಡಾಡುವವರೂ ಮೊಬೈಲ್ ಫೋನ್ ಬಳಕೆ ಮಾಡದಂತಹ ಪರಿಸ್ಥಿತಿ ಉಂಟಾಗಿದ್ದು ಈ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳೂರಿನ ಕಾರಾಗೃಹದಲ್ಲಿ ಜಾಮರ್ ಅಳವಡಿಕೆ ಮಾಡಲಾಗಿದೆ.
ಆದರೆ ಈ ಜಾಮರ್ನಿಂದಾಗಿ ಕಾರಾಗೃಹದ ಸುತ್ತಮುತ್ತದ ಪ್ರದೇಶಗಳಲ್ಲಿಯೂ ನೆಟ್ವರ್ಕ್ ಸಿಗದೇ ಜನರು ಪರದಾಡುವಂತಾಗಿದೆ. ಈ ಜಾಮರ್ ನೆಟ್ವರ್ಕ್ ಸಮಸ್ಯೆಯ ಬಿಸಿ ಕಾರಾಗೃಹದಿಂದ 300 ಮೀಟರ್ ದೂರದಲ್ಲೇ ಇರುವ ನ್ಯಾಯಾಲಯಕ್ಕೂ ತಟ್ಟಿದ್ದು ವಕೀಲರಿಗೆ ತಮ್ಮ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್ನಿಂದ ಸ್ಥಳೀಯರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲೇಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಮಂಗಳೂರು ವಕೀಲರ ಸಂಘ ಸರ್ಕಾರಕ್ಕೆ ರವಾನೆ ಮಾಡಿದೆ.
ಇದನ್ನೂ ಓದಿ: ಬಾಬಾರಾಮ್ ದೇವ್ ಹೈಕೋರ್ಟ್ ಛೀಮಾರಿ, ಚವನ್ ಪ್ರಾಶ್ ಉತ್ಪನ್ನ ಜಾಹೀರಾತಿಗೆ ಬ್ರೇಕ್
ಕಾರಾಗೃಹದ ಒಳಗೆ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಆದರೆ ಹೊರಗೆ ನಾವು ನೆಟ್ವರ್ಕ್ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ಕೋರ್ಟ್ನಲ್ಲಿ ಮೊಬೈಲ್ ಫೋನ್ ಮೂಲಕ ಕಕ್ಷಿದಾರರ ಜೊತೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ.
ಇದರಿಂದ ನಮ್ಮ ಕಾರ್ಯವೈಖರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ಮಂಗಳೂರು ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ . ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ನ್ಯಾಯಪೀಠ ಜೈಲಿನಲ್ಲಿ ಅಳವಡಿಸಲಾಗಿರುವ ಜಾಮರ್ನ ವರದಿ ಕೇಳಿದೆ.
ಜೈಲಿನ ಜಾಮರ್ (Jail Jammer Effect) ವಿರುದ್ಧ ವಕೀಲರ ಸಂಘ ಗಂಭೀರ ಹೋರಾಟಕ್ಕೆ ಮುಂದಾಗಿದ್ದು ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.



