ದೆಹಲಿ ಸ್ಫೋಟ ಪ್ರಕರಣ : ಉಡುಪಿ – ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಮುನ್ನೆಚ್ಚರಿಕಾ ಕ್ರಮ
high alert in udupi mangalore ಉಡುಪಿ – ದಕ್ಷಿಣ ಕನ್ನಡ: ದೆಹಲಿಯಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದಿಂದಾಗಿ ಸಂಪೂರ್ಣ ದೇಶವೇ ಬೆಚ್ಚಿ ಬಿದ್ದಿದೆ .ದೆಹಲಿಯಲ್ಲಿ ವೈಟ್ ಕಾಲರ್ ಭಯೋತ್ಪಾದನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ವೈದ್ಯ ಎಂದು ಹೇಳಲಾಗುತ್ತಿದೆ.
12 ಜನರ ಸಾವಿಗೆ ಕಾರಣವಾದ ಈ ಕಾರು ಸ್ಫೋಟ ಪ್ರಕರಣದಲ್ಲಿ ಸ್ಫೋಟಕವಾಗಿ ಅಮೋನಿಯಂ ನೈಟ್ರೇಟ್ ಮತ್ತು ಇಂಧನ ತೈಲ ಹಾಗೂ ಡಿಟೋನೇಟರ್ಗಳನ್ನು ಬಳಕೆ ಮಾಡಿದ್ದಾಗಿ ತಿಳಿದುಬಂದಿದೆ.
ಇನ್ನು ದೆಹಲಿಯಲ್ಲಿ ಈ ಘಟನೆ ನಡೆದ ಬೆನ್ನಲ್ಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿಯೂ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಉಭಯ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು picketing point ಕರ್ತವ್ಯದಲ್ಲಿ ನಿಯೋಜಿಸಿ ನಿಗಾವಹಿಸಲಾಗುತ್ತಿದೆ.
ಇದನ್ನೂ ಓದಿ: ದೆಹಲಿಯಲ್ಲಿ ನಡೆದಿರುವುದು ಆತ್ಮಾಹುತಿ ದಾಳಿ ಶಂಕೆ: 3 ಗಂಟೆಗಳ ಕಾಲ ಕಾರಿನಿಂದಿಳಿಯದೇ ಕುಳಿತಿದ್ದ ಚಾಲಕ
ಇನ್ನು ಇದರ ಜೊತೆಯಲ್ಲಿ ಜಿಲ್ಲೆಯ ಮುಖ್ಯ ಸ್ಥಳಗಳಲ್ಲಿ ನಾಕಾಬಂದಿಗಳನ್ನು ಅಳವಡಿಸಿ ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ (high alert in udupi mangalore) .ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಮುಖ್ಯ ಸರ್ಕಾರಿ ಕಟ್ಟಡಗಳು ಸೇರಿದಂತೆ ಜನದಟ್ಟಣೆಯ ಇರುವ ಜಾಗಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಿ ನಿಗಾವಹಿಸಲಾಗುತ್ತಿದೆ.
ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಅಥವಾ ಸಂಶಯಾಸ್ಪದ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕಾಗಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ



