ಕ್ಲೈಮ್ಯಾಕ್ಸ್ ಹಂತ ತಲುಪಿದ ನವೆಂಬರ್ ಕ್ರಾಂತಿ : ಸಿದ್ದರಾಮಯ್ಯ – ಡಿಕೆಶಿ ನಡುವೆ ರಾಜಿ ಸಂಧಾನಕ್ಕೆ ಮುಂದಾದ ಹೈಕಮಾಂಡ್

Karnataka November Revolution climax : ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಾಯಕತ್ವ ಗೊಂದಲ ಪರಿಹಾರಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಮದ್ದು ಅರೆದಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಸಂಧಾನ ಅಸ್ತ್ರ ಪ್ರಯೋಗಿಸಲು ಸಿದ್ಧವಾಗಿರುವ ಹೈಕಮಾಂಡ್ ಇಬ್ಬರಿಗೂ ದೆಹಲಿಗೆ ಬುಲಾವ್ ನೀಡಿದೆ.
ಸರ್ಕಾರ ನಿರ್ಮಾಣದ ಸಂದರ್ಭದಲ್ಲಿ ನೀಡಿದ್ದ ಪವರ್ ಶೇರಿಂಗ್ ಆಶ್ವಾಸನೆಯ ನಿಯಮಾವಳಿಗಳನ್ನು ಮುಂದಿಟ್ಟುಕೊಂಡೇ ಈ ಸಂಧಾನ ನಡೆಯಲಿದೆ ಎನ್ನಲಾಗಿದೆ. ಈ ಸಂಧಾನ ಸಭೆಗೆ ನವೆಂಬರ್ 29ರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ.
ನಾಯಕತ್ವ ಗೊಂದಲಕ್ಕೆ ಪರಿಹಾರ ಹುಡುಕಲು ಬೆಂಗಳೂರಿಗೆ ಆಗಮಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇಲ್ಲಿನ ಗ್ರೌಂಡ್ ರಿಪೋರ್ಟ್ನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.
ಪಕ್ಷದಲ್ಲಿ ಒಗ್ಗಟ್ಟಿಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ನಮ್ಮಲ್ಲೇ ಬಂಡಾಯ ಆರಂಭಗೊಂಡರೆ ಅದರಿಂದ ವಿಪಕ್ಷಗಳಿಗೆ ಲಾಭವೇ ಹೊರತು ನಮಗಲ್ಲ ಎಂಬರ್ಥದಲ್ಲಿ ಸಂಧಾನ ನಡೆಸುವುದು ಹೈಕಮಾಂಡ್ ಪ್ಲಾನ್ ಎನ್ನಲಾಗಿದೆ.
ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ಯಾವ ರೀತಿಯ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಆದರೆ ಹೈಕಮಾಂಡ್ನ ಯಾವುದೇ ನಿರ್ಧಾರಕ್ಕೂ ಬದ್ಧರಾಗಿ ಇರುವುದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೂ ತಿಳಿಸಿದ್ದಾರೆ ಎನ್ನಲಾಗಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿದ್ದ ಒಗ್ಗಟ್ಟು ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯ ನಾಯಕರಿಗೆ ಸಂಧಾನ ಸಭೆಯಲ್ಲಿ ವರಿಷ್ಠರು ಖಡಕ್ ಸೂಚನೆ ನೀಡುವ ಸಾಧ್ಯತೆಯಿದೆ.
ನಮ್ಮ ನಡುವಿನ ಒಳಜಗಳ ವಿಪಕ್ಷಗಳಿಗೆ ಅಸ್ತ್ರವಾಗಬಾರದು. ಅಧಿಕಾರಕ್ಕಿಂತ ಒಗ್ಗಟ್ಟು ಮುಖ್ಯ ಎಂದು ಎರಡೂ ಬಣಗಳ ನಾಯಕರಿಗೆ ಬುದ್ಧಿವಾದ ಹೇಳುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದ್ದು, ಈ ರಾಜಿ ಸಂಧಾನ ಯಶಸ್ವಿಯಾಗುತ್ತಾ ಇಲ್ಲವಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.
Karnataka November Revolution climax compromise between Siddaramaiah and DK Shivakumar



