New Serial: ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ‘ಜೈ ಲಲಿತಾ’ ಕಥೆ
ಕಿರುತೆರೆ ವೀಕ್ಷಕರಿಗೆ ಸದಾ ಹೊಸತನವನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಮತ್ತೊಂದು ಆಕರ್ಷಕ ಕಥಾಹಂದರವನ್ನು ಹೊಂದಿರುವ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಆ ನವೀನ ಪ್ರಯತ್ನವೇ ‘ಜೈ ಲಲಿತಾ’. ಈ ಧಾರಾವಾಹಿಯು (Jai Lalitha New Serial) ಇದೇ ಡಿಸೆಂಬರ್ 8, 2025 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.
‘ಜೈ ಲಲಿತಾ’ ಒಂದು ವಿಭಿನ್ನ ಕೌಟುಂಬಿಕ ಮತ್ತು ಸಾಮಾಜಿಕ ಕಥೆಯಾಗಿದ್ದು, ಇದರ ಕೇಂದ್ರಬಿಂದು ಲಲಿತಾ ಎಂಬ ಉತ್ಸಾಹಭರಿತ ಯುವತಿ. ಭೈರವಪುರ ಎಂಬ ಸಂಪ್ರದಾಯಬದ್ಧ ಹಳ್ಳಿಯಲ್ಲಿ ಬೆಳೆದಿರುವ ಲಲಿತಾ, ತನ್ನ ತಂದೆಗೆ ಮುದ್ದಿನ ಮಗಳು. ಆದರೆ, ಆಕೆ ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದಾಳೆ; ಅದರಲ್ಲಿ ಮುಖ್ಯವಾದದ್ದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ ಲಲಿತಾ, ಯಶ್ ಅವರಂತೆಯೇ ಇರುವ ಹುಡುಗನನ್ನು ಮದುವೆಯಾಗುವ ಕನಸು.
ಆದರೆ, ಕಥೆಯು ಒಂದು ರೋಚಕ ತಿರುವು ಪಡೆಯುತ್ತದೆ. ಬಿ.ಎ. ಪದವಿ ಪೂರೈಸುವ ಮಹದಾಸೆ ಹೊಂದಿದ್ದ ಲಲಿತಾ, ಅನಿರೀಕ್ಷಿತವಾಗಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಾಳೆ. ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷೆಯ ಸ್ಥಾನ ಅಲಂಕರಿಸುತ್ತಾಳೆ. ಈ ಅನಿರೀಕ್ಷಿತ ರಾಜಕೀಯ ಜವಾಬ್ದಾರಿ ಲಲಿತಾಳ ಕನಸುಗಳು ಮತ್ತು ಕರ್ತವ್ಯಗಳ ನಡುವೆ ಒಂದು ದೊಡ್ಡ ಸವಾಲನ್ನು ಸೃಷ್ಟಿಸುತ್ತದೆ.
ಪ್ರಮುಖ ಪಾತ್ರವರ್ಗ ಮತ್ತು ನಿರ್ದೇಶನ
ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಲಲಿತಾ ಆಗಿ ನಟಿ ಮನಸ್ವಿನಿ ಮತ್ತು ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಭ್ರಾಮರೀ ಕ್ರಿಯೇಶನ್ಸ್‌ನಡಿ (ಶ್ರೀನಿಧಿ ಡಿ. ಎಸ್. ನಿರ್ಮಾಣ) ಮೂಡಿಬರುತ್ತಿರುವ ಈ ಧಾರಾವಾಹಿಗೆ ದರ್ಶಿತ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿಗೆ ಕೀರ್ತಿ ತಂದ ಯುವಕ
ಲಲಿತಾ ತನ್ನ ಮುಗ್ಧತೆ ಮತ್ತು ದೃಢ ಮನಸ್ಸಿನಿಂದ ರಾಜಕೀಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ? ತನ್ನ ವೈಯಕ್ತಿಕ ಕನಸು ಮತ್ತು ಲೋಕ ಕಲ್ಯಾಣದ ನಡುವೆ ಆಕೆ ಹೇಗೆ ಸಮತೋಲನ ಕಾಯುತ್ತಾಳೆ ಎಂಬುದನ್ನು ಈ ಧಾರಾವಾಹಿಯು ಹಾಸ್ಯ, ರೋಮಾಂಚನ ಮತ್ತು ಭಾವನಾತ್ಮಕ ಕ್ಷಣಗಳ ಮೂಲಕ ವೀಕ್ಷಕರ ಮುಂದೆ ತೆರೆದಿಡಲಿದೆ. ‘ಜೈ ಲಲಿತಾ’ ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸುವ ನಿರೀಕ್ಷೆಯಿದೆ.



