ಕ್ರಿಕೆಟ್ ನೇರಪ್ರಸಾರದಿಂದ ಏಕಾಏಕಿ ಹಿಂದೆ ಸರಿದ ಜಿಯೋ ಹಾಟ್ಸ್ಟಾರ್ : ಐಸಿಸಿಗೆ ಶುರು ಹೊಸ ತಲೆನೋವು
ಕೇಂದ್ರ ಸರ್ಕಾರ ಆನ್ಲೈನ್ ಗೇಮ್ ಕಾಯ್ದೆ 2025 ಜಾರಿಗೆ ತಂದ ಬೆನ್ನಲ್ಲೇ ಜಿಯೋ ಹಾಟ್ಸ್ಟಾರ್ ಕಂಪನಿಯು ಐಸಿಸಿಗೆ ಬಿಸಿ ಮುಟ್ಟಿಸಿದೆ. 2026ರ ಟಿ 20 ವಿಶ್ವಕಪ್ ಆರಂಭಕ್ಕೆ ಕೇವಲ 2 ತಿಂಗಳು ಬಾಕಿ ಇರುವಾಗಲೇ, ಐಸಿಸಿಗೆ ಶಾಕ್ ನೀಡಿದೆ. ಪಂದ್ಯಗಳ ನೇರ ಪ್ರಸಾರದ ಹಕ್ಕು ಹೊಂದಿರುವ ಜಿಯೋ ಹಾಟ್ಸ್ಟಾರ್ ನೇರಪ್ರಸಾರ ಒಪ್ಪಂದದಿಂದ ಹೊರಬಂದಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಐಸಿಸಿ ಇದೀಗ ಹೊಸ ಪ್ರಸಾರಕರಿಗಾಗಿ ಹುಡುಕಾಟ ಆರಂಭಿಸಿದೆ.
ಕೇಂದ್ರ ಸರ್ಕಾರದ ಈ ಕಾಯ್ದೆಯಿಂದಾಗಿ ಜಿಯೋ ಹಾಟ್ಸ್ಟಾರ್ ಕಂಪನಿಗೆ ಜಾಹೀರಾತು ನಷ್ಟವಾಗಿದ್ದು, ಈ ಹಿನ್ನೆಲೆಯಿಂದ ನೇರಪ್ರಸಾರ ಒಡಂಬಡಿಕೆಯಿಂದ ಹೊರಬಂದಿದೆ ಎನ್ನಲಾಗಿದೆ. 2027ರವರೆಗೂ ನೇರಪ್ರಸಾರದ ಹಕ್ಕು ಹೊಂದಿದ್ದ ಜಿಯೋ ಹಾಟ್ಸ್ಟಾರ್ 2 ವರ್ಷಗಳ ಮೊದಲೇ ಇದನ್ನು ರದ್ದುಗೊಳಿಸಲು ಮುಂದಾಗಿದೆ. ಹೀಗಾಗಿ ಐಸಿಸಿ ಸದ್ಯ 2026 ರಿಂದ 2027ರ ಅವಧಿಗೆ ಹೊಸ ಪ್ರಸಾರಕರ ಹುಡುಕಾಟದಲ್ಲಿದೆ.
ಇದನ್ನೂ ಓದಿ: ಐಪಿಎಲ್ ಜಗಳ: ಗೌತಮ್ ಗಂಭೀರ್-ಪಾರ್ಥ್ ಜಿಂದಾಲ್ ನಡುವಿನ ವಿವಾದ ಆಗಿದ್ದೇಕೆ?
ರಿಲಯನ್ಸ್ ಸಂಸ್ಥೆ ಮಾಲೀಕತ್ವದ ಜಿಯೋಸ್ಟಾರ್ 2024-25ನೇ ಸಾಲಿನಲ್ಲಿ ಸುಮಾರು 25,760 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. 2023-24ನೇ ಸಾಲಿನಲ್ಲಿ 12,319 ಕೋಟಿ ರೂಪಾಯಿ ನಷ್ಟ ಕಂಡಿದೆ. ಕೇಂದ್ರ ಸರ್ಕಾರದ ಈ ಕಾಯ್ದೆಯಿಂದಾಗಿ ರಿಯಲ್ ಮನಿ ಗೇಮಿಂಗ್ಗಳಾದ Dream11, Mycircle ನಂತಹ ಜಾಹೀರಾತುಗಳ ಪ್ರದರ್ಶನಕ್ಕೆ ಕೊಕ್ಕೆ ಬಿದ್ದಿರುವುದೇ ನಷ್ಟಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಅವಧಿಗೂ ಮುನ್ನವೇ ಜಿಯೋ ಹಾಟ್ಸ್ಟಾರ್ ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ. ಡಿಸ್ನಿ ಹಾಟ್ಸ್ಟಾರ್ ಖರೀದಿ ಮಾಡಿದ್ದ ರಿಲಯನ್ಸ್ ಕಂಪನಿ ಇದಕ್ಕೆ ಜಿಯೋ ಹಾಟ್ಸ್ಟಾರ್ ಎಂದು ನಾಮಕರಣ ಮಾಡಿತ್ತು. ಇದೀಗ ಜಿಯೋ ಹಾಟ್ಸ್ಟಾರ್ನಿಂದ ಈ ನಿರ್ಧಾರದಿಂದಾಗಿ ಐಸಿಸಿಗೆ ಹೊಸ ಪ್ರಸಾರಕರ ತಲಾಶ್ ಮಾಡುವ ಅನಿವಾರ್ಯತೆ ಎದುರಾಗಿದೆ.



