ಹೊಸ ಟ್ರೆಂಡ್ ‘ಸ್ಲೀಪ್ ಡಿವೋರ್ಸ್’: ದಾಂಪತ್ಯ ಉಳಿಸಿಕೊಳ್ಳಲು ದಂಪತಿಗಳು ಹೀಗೆ ಮಲಗಬೇಕಂತೆ!

ಸಾಮಾನ್ಯವಾಗಿ ಮದುವೆಯಾದ ಮೇಲೆ ಗಂಡ-ಹೆಂಡತಿ ಒಂದೇ ರೂಮಿನಲ್ಲಿ, ಒಂದೇ ಹಾಸಿಗೆಯ ಮೇಲೆ ಮಲಗುವುದು ಸಂಪ್ರದಾಯ. ಆದರೆ, ಈಗಿನ ಕಾಲದ ದಂಪತಿಗಳು ಈ ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ರಾತ್ರಿಯಾದ ಕೂಡಲೇ “ಬೈ ಬೈ” ಎಂದು ಹೇಳಿ ಒಬ್ಬರು ಒಂದು ರೂಮಿಗೆ ಹೋದರೆ, ಇನ್ನೊಬ್ಬರು ಮತ್ತೊಂದು ರೂಮಿಗೆ ಹೋಗುತ್ತಿದ್ದಾರೆ. ಇದನ್ನೇ ಮನಃಶಾಸ್ತ್ರಜ್ಞರು ‘ಸ್ಲೀಪ್ ಡಿವೋರ್ಸ್’ ಎಂದು ಕರೆಯುತ್ತಿದ್ದಾರೆ.

ಏನಿದು ಸ್ಲೀಪ್ ಡಿವೋರ್ಸ್?

ಸರಳವಾಗಿ ಹೇಳಬೇಕೆಂದರೆ, ದಂಪತಿಗಳು ಪರಸ್ಪರ ಪ್ರೀತಿಸುತ್ತಿದ್ದರೂ, ಕೇವಲ *ಉತ್ತಮ ನಿದ್ರೆಗಾಗಿ ರಾತ್ರಿ ವೇಳೆ ಪ್ರತ್ಯೇಕ ಹಾಸಿಗೆ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುವ ಪದ್ಧತಿ. ಇದು ಕಾನೂನಾತ್ಮಕ ವಿಚ್ಛೇದನವಲ್ಲ, ಬದಲಾಗಿ ನಿದ್ರೆಯ ವಿಷಯದಲ್ಲಿ ಮಾತ್ರ ದೂರವಾಗುವುದು.

ದಂಪತಿಗಳು ಪ್ರತ್ಯೇಕವಾಗಿ ಮಲಗಲು ಕೆಲವು ಪ್ರಮುಖ ಕಿರಿಕಿರಿಗಳೇ ಕಾರಣ:

  • ಗೊರಕೆ ರಾಮಾಯಣ: ಸಂಗಾತಿಯ ಜೋರಾದ ಗೊರಕೆಯಿಂದಾಗಿ ಮತ್ತೊಬ್ಬರಿಗೆ ನಿದ್ರೆ ಬಾರದಿರುವುದು.
  • ಕಂಬಳಿ ಜಗಳ: ಒಬ್ಬರು ಬೆದರು ಎಳೆದುಕೊಂಡರೆ ಇನ್ನೊಬ್ಬರಿಗೆ ಚಳಿ! ಕಂಬಳಿಗಾಗಿ ನಡೆಯುವ ಈ ಸದ್ದಿಲ್ಲದ ಯುದ್ಧಕ್ಕೆ ಬ್ರೇಕ್ ಹಾಕಲು.
  • ಭಿನ್ನ ಜೀವನಶೈಲಿ: ಒಬ್ಬರು ರಾತ್ರಿ ಬೇಗ ಮಲಗುವವರಾದರೆ (Early Bird), ಇನ್ನೊಬ್ಬರು ರಾತ್ರಿ ಪೂರ್ತಿ ಮೊಬೈಲ್ ನೋಡುವ ಅಥವಾ ಕೆಲಸ ಮಾಡುವ ‘ನೈಟ್ ಔಲ್’ (Night Owl) ಆಗಿರುತ್ತಾರೆ.
  • ಕಾಲು ಬಡಿಯುವ ಅಭ್ಯಾಸ: ಮಲಗಿದ ಮೇಲೆ ಪದೇ ಪದೇ ಹೊರಳಾಡುವುದು ಅಥವಾ ಸಂಗಾತಿಗೆ ಒದೆಯುವ ಅಭ್ಯಾಸವಿದ್ದರೆ ಇದು ಅನಿವಾರ್ಯವಾಗುತ್ತದೆ.

ಇದರಿಂದ ಲಾಭವೇನು?

ಸಂಶೋಧನೆಗಳ ಪ್ರಕಾರ, ಸ್ಲೀಪ್ ಡಿವೋರ್ಸ್ ಮಾಡಿಕೊಂಡ ದಂಪತಿಗಳಲ್ಲಿ ಸಂಘರ್ಷ ಕಡಿಮೆ ಇರುತ್ತದೆಯಂತೆ!

  1. ಆರೋಗ್ಯ ಸುಧಾರಣೆ: ತಡೆರಹಿತ 7-8 ಗಂಟೆಗಳ ನಿದ್ರೆ ಸಿಗುವುದರಿಂದ ಮೂಡ್ ಫ್ರೆಶ್ ಆಗಿರುತ್ತದೆ.
  2. ಕಿರಿಕಿರಿ ಮುಕ್ತಿ: ನಿದ್ರೆಯಿಲ್ಲದೆ ಬೆಳಗ್ಗೆ ಎದ್ದಾಗ ಆಗುವ ಸಿಟ್ಟು, ಚೀರಾಟಗಳು ಇರುವುದಿಲ್ಲ. ಇದರಿಂದ ದಂಪತಿಗಳ ನಡುವೆ ಪ್ರೀತಿ ಹೆಚ್ಚುತ್ತದೆ.
  3. ಸಂಬಂಧಕ್ಕೆ ಕಿಚ್ಚು: ದಿನವಿಡೀ ಒಟ್ಟಿಗೆ ಇದ್ದು, ರಾತ್ರಿ ಮಾತ್ರ ಪ್ರತ್ಯೇಕವಾಗಿ ಮಲಗುವುದರಿಂದ ಪರಸ್ಪರರ ಮೇಲೆ ಗೌರವ ಮತ್ತು ಹಂಬಲ ಹೆಚ್ಚುತ್ತದೆ ಎಂದು ಹಲವು ದಂಪತಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ. ತಜ್ಞರ ಪ್ರಕಾರ, ಇದರಿಂದ ದಂಪತಿಗಳ ನಡುವೆ ‘ದೈಹಿಕ ಅನ್ಯೋನ್ಯತೆ’ (Physical Intimacy) ಕಡಿಮೆಯಾಗುವ ಅಪಾಯವಿದೆ. ಮಲಗುವ ಮುನ್ನ ಆಡುವ ಮಾತುಗಳು, ಹರಟೆಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಪ್ರತ್ಯೇಕವಾಗಿ ಮಲಗುವುದರಿಂದ ಈ ಬಂಧ ಸಡಿಲವಾಗಬಹುದು ಎಂಬ ಆತಂಕವೂ ಇದೆ.

ಇದನ್ನೂ ಓದಿ: ಅಯೋಧ್ಯೆಗೆ ₹30 ಕೋಟಿ ಮೌಲ್ಯದ ರಾಮಲಲ್ಲಾನ ವಿಗ್ರಹ ದೇಣಿಗೆ ನೀಡಿದ ಕರ್ನಾಟಕ ಮೂಲದ ವ್ಯಕ್ತಿ

ಭಾರತದಲ್ಲೂ ಟ್ರೆಂಡ್:
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಭಾರತದ ಮೆಟ್ರೋ ಸಿಟಿಗಳಲ್ಲಿ ಶೇ. 15ಕ್ಕೂ ಹೆಚ್ಚು ದಂಪತಿಗಳು ಈ ಸ್ಲೀಪ್ ಡಿವೋರ್ಸ್ ಹಾದಿ ಹಿಡಿದಿದ್ದಾರೆ. “ನಿದ್ರೆ ಮುಖ್ಯವೋ ಅಥವಾ ಒಟ್ಟಿಗೆ ಮಲಗುವುದು ಮುಖ್ಯವೋ?” ಎಂಬುದು ಆಯಾ ದಂಪತಿಗಳ ವೈಯಕ್ತಿಕ ನಿರ್ಧಾರ. ಆದರೆ, ಸಂಬಂಧ ಚೆನ್ನಾಗಿರಬೇಕು ಅಂದರೆ ಮೊದಲು ಮೆದುಳು ಮತ್ತು ಮನಸ್ಸಿಗೆ ಸರಿಯಾದ ವಿಶ್ರಾಂತಿ ಬೇಕು ಎಂಬುದಂತೂ ಸತ್ಯ!

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories