ಈತನಿಗೆ ಅಕ್ಕ ತಂಗಿ ಇಬ್ರೂ ಬೇಕಂತೆ; ಬೆಂಗಳೂರು ಪೊಲೀಸರಿಂದ ಖತರ್ನಾಕ್‌ ಅರೆಸ್ಟ್

ಬೆಂಗಳೂರು: ಪ್ರೀತಿ ಹಾಗೂ ವಿವಾಹದ ಆಮಿಷವೊಡ್ಡಿ ಯುವತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಲ್ಲದೆ, ಸಂತ್ರಸ್ತೆಯ ಅಪ್ರಾಪ್ತ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಭಾರತ ಮೂಲದ ಶುಭಾಂಶು ಶುಕ್ಲಾ (27) ಎಂದು ಗುರುತಿಸಲಾಗಿದೆ. ಈತ ವ್ಯವಸ್ಥಿತವಾಗಿ ಸಂಚು ರೂಪಿಸಿ ಒಂದೇ ಕುಟುಂಬದ ಇಬ್ಬರು ಸಹೋದರಿಯರನ್ನು ಲೈಂಗಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ: ‘ಲಿವಿನ್ ರಿಲೇಷನ್‌ಶಿಪ್’ ಹೆಸರಲ್ಲಿ ದೋಖಾ

ಆರೋಪಿ ಶುಭಾಂಶು ಮೊದಲು ಸಂತ್ರಸ್ತೆಯ ಅಪ್ರಾಪ್ತ ಸಹೋದರಿಯ ಪರಿಚಯ ಮಾಡಿಕೊಂಡಿದ್ದ. ಆಕೆಯ ಮೂಲಕ ಮನೆಯವರ ವಿಶ್ವಾಸ ಗಳಿಸಿ, ನಂತರ ಸಂತ್ರಸ್ತ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ. ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದ ಯುವತಿ, ಆರೋಪಿಯ ಜೊತೆ ತೆರಳಿ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಳು ಎನ್ನಲಾಗಿದೆ.

ಆದರೆ, ದಿನ ಕಳೆದಂತೆ ಆರೋಪಿಗೆ ಈಗಾಗಲೇ ಮದುವೆಯಾಗಿರುವ ವಿಷಯ ಸಂತ್ರಸ್ತೆಗೆ ತಿಳಿದಿದೆ. ಈ ವೇಳೆ ತನ್ನ ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿದ್ದ ಶುಭಾಂಶು, ತನ್ನ ಪತ್ನಿಯ ಮೂಲಕವೂ ಸಂತ್ರಸ್ತೆಗೆ ಫೋನ್ ಮಾಡಿಸಿ ನಂಬಿಕೆ ದ್ರೋಹ ಎಸಗಿದ್ದ ಎನ್ನಲಾಗಿದೆ.

ಬಯಲಾದ ಅಸಲಿ ಮುಖ: ಚಿತ್ರಹಿಂಸೆ ಮತ್ತು ದೌರ್ಜನ್ಯ

ಶುಭಾಂಶು ಮತ್ತೊಬ್ಬ ಅಪ್ರಾಪ್ತ ಯುವತಿಗೂ ಇದೇ ರೀತಿ ವಂಚಿಸುತ್ತಿರುವುದು ಸಂತ್ರಸ್ತೆಯ ಗಮನಕ್ಕೆ ಬಂದಾಗ, ಆಕೆ ಆತನ ಬಣ್ಣವನ್ನು ಬಯಲು ಮಾಡಿದ್ದಳು. ಇದರಿಂದ ಕೆರಳಿದ ಆರೋಪಿ ಯುವತಿಗೆ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾನೆ.

ಆರ್ಥಿಕ ವಂಚನೆ: ಸಂತ್ರಸ್ತೆಯಿಂದ ಸುಮಾರು 37 ಲಕ್ಷ ರೂಪಾಯಿ ನಗದು ಪಡೆದಿದ್ದಲ್ಲದೆ, ಆಕೆಯ ಮನೆಯಲ್ಲಿದ್ದ ಸುಮಾರು 559 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಗ್ರೂಪ್ ಸ್ಟಡಿ ನೆಪದಲ್ಲಿ ಪರಿಚಯವಾಗಿದ್ದ ಸಂತ್ರಸ್ತೆಯ ಅಪ್ರಾಪ್ತ ತಂಗಿಯ ಮೇಲೂ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. “ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಬಿಡುವುದಿಲ್ಲ” ಎಂದು ಬೆದರಿಸಿ, ಆಕೆಯ ಮೂಲಕವೇ ಮನೆಯವರ ಪರಿಚಯ ಮಾಡಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಇದನ್ನೂ ಓದಿ: ಅಂಡರ್-19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಆಯುಷ್ ಮ್ಹಾತ್ರೆ ನಾಯಕ, ವೈಭವ್ ಸೂರ್ಯವಂಶಿಗೆ ಸ್ಥಾನ

ಪೊಲೀಸ್ ಕ್ರಮ

ಆರೋಪಿಯ ಕಿರುಕುಳ ತಾಳಲಾರದೆ ಸಂತ್ರಸ್ತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಅತ್ಯಾಚಾರ, ವಂಚನೆ, ಕಳ್ಳತನ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories