ಸಿಇಟಿ 2026 ಅಧಿಕೃತ ವೇಳಾಪಟ್ಟಿ ಪ್ರಕಟ: ಏಪ್ರಿಲ್ 23, 24 ರಂದು ಪರೀಕ್ಷೆ; ಜೂನ್ನಲ್ಲಿ ಕೌನ್ಸಿಲಿಂಗ್

CET 2026 date announced: ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಅಧಿಕೃತ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಶುಕ್ರವಾರ ಬಿಡುಗಡೆ ಮಾಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ ಮತ್ತು ಸಂಪೂರ್ಣ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಒಳಗೊಂಡ ‘ಮಾಹಿತಿ ಪುಸ್ತಕ’ವನ್ನು (Bulletin) ಲೋಕಾರ್ಪಣೆಗೊಳಿಸಲಾಯಿತು.
ಸಿಇಟಿ 2026 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಜನವರಿ 17, 2026
ಕನ್ನಡ ಭಾಷಾ ಪರೀಕ್ಷೆ: ಏಪ್ರಿಲ್ 22, 2026 (ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ)
ಸಿಇಟಿ ಮುಖ್ಯ ಪರೀಕ್ಷೆ: * ಏಪ್ರಿಲ್ 23 (ಗುರುವಾರ): ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry)
ಏಪ್ರಿಲ್ 24 (ಶುಕ್ರವಾರ): ಗಣಿತ (Mathematics) ಮತ್ತು ಜೀವಶಾಸ್ತ್ರ (Biology)
ಪರೀಕ್ಷಾ ವಿಧಾನ: ಪ್ರತಿ ವಿಷಯವು 60 ಅಂಕಗಳನ್ನು ಹೊಂದಿರಲಿದ್ದು, ಒಟ್ಟು 240 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
KEA ನಡೆಸುವ ಇತರ ಪರೀಕ್ಷೆಗಳ ವೇಳಾಪಟ್ಟಿ:
ಪ್ರಾಧಿಕಾರವು ಈ ಬಾರಿ ಇತರೆ ಪ್ರಮುಖ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನೂ ಘೋಷಿಸಿದೆ:
KRIES (6ನೇ ತರಗತಿ ಪ್ರವೇಶ): ಮಾರ್ಚ್ 1, 2026
PGCET (MBA/MCA): ಮೇ 14, 2026
DCET (ಲ್ಯಾಟರಲ್ ಎಂಟ್ರಿ ಇಂಜಿನಿಯರಿಂಗ್): ಮೇ 23, 2026
M.Sc ನರ್ಸಿಂಗ್/MPT: ಜುಲೈ 18, 2026
KSET (ರಾಜ್ಯ ಅರ್ಹತಾ ಪರೀಕ್ಷೆ): ಅಕ್ಟೋಬರ್ 11, 2026
ಇದನ್ನೂ ಓದಿ: ಕಳಪೆ ನೆಟ್ವರ್ಕ್ನಿಂದ ಬೇಸತ್ತು ಹೋಗಿದ್ದೀರಾ? ಹೊಸ ವರ್ಷಕ್ಕೆ ಬಿಎಸ್ಎನ್ಎಲ್ನಿಂದ ಹೊಸ ಸೇವೆ ಪ್ರಾರಂಭ
ಗೊಂದಲ ನಿವಾರಣೆಗೆ ‘ಮಾಹಿತಿ ಪುಸ್ತಕ’:
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು, ವಿಶೇಷವಾಗಿ ಗ್ರಾಮೀಣ ಭಾಗದವರು ಮಾಡುವ ತಪ್ಪುಗಳನ್ನು ತಡೆಗಟ್ಟಲು ಈ ಬಾರಿ 3.75 ಲಕ್ಷ ಪ್ರತಿಗಳ ‘ದಿಕ್ಕು ಸೂಚಿ’ ಪುಸ್ತಕವನ್ನು ಮುದ್ರಿಸಲಾಗಿದೆ. “ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಿಸಲು ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಪುಸ್ತಕವು ಅತ್ಯಂತ ಸಹಕಾರಿಯಾಗಲಿದೆ” ಎಂದು ಸಚಿವ ಸುಧಾಕರ್ ತಿಳಿಸಿದರು. ಅಲ್ಲದೆ, ಕೆಇಎ ಕಚೇರಿಯ ಆಧುನೀಕರಣ ಮತ್ತು ಹೊಸ ಸಭಾಂಗಣಗಳ ಉದ್ಘಾಟನೆಯ ಮೂಲಕ ಪ್ರಾಧಿಕಾರದ ಕಾರ್ಯವೈಖರಿಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.



