ಬಳ್ಳಾರಿ ಶೂಟೌಟ್ ಕೇಸ್: ಅಮಾನತು ಬೆನ್ನಲ್ಲೇ ಎಸ್‌ಪಿ ಪವನ್ ನೆಜ್ಜೂರು ಆತ್ಮಹತ್ಯೆಗೆ ಯತ್ನ?
Ballari Shootout Case | SP Praveen Sarjapur Suicide: ತುಮಕೂರು/ಬಳ್ಳಾರಿ: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಗಲಭೆ ಮತ್ತು ಶೂಟೌಟ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪವನ್ ನೆಜ್ಜೂರು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಗಳು ಹರದಿದಾಡುತ್ತಿವೆ. ತುಮಕೂರಿನ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮಾತ್ರೆಗಳನ್ನು ಸೇವಿಸುವ ಮೂಲಕ ಅವರು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ.
ಘಟನೆಯ ಹಿನ್ನೆಲೆ:
ಬಳ್ಳಾರಿಯಲ್ಲಿ ನಡೆದ ಗುಂಪು ಘರ್ಷಣೆ ಮತ್ತು ಸಾರ್ವಜನಿಕವಾಗಿ ನಡೆದ ಶೂಟೌಟ್ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯನ್ನು ನಿಯಂತ್ರಿಸುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಪವನ್ ನೆಜ್ಜೂರು ಅವರನ್ನು ಬಳ್ಳಾರಿಗೆ ನಿಯುಕ್ತಿಗೊಂಡ ಕೇವಲ ಏಳು ಗಂಟೆಗಳಲ್ಲಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಇಸ್ಲಾಮಿಕ್ ‘ಸುಲ್ತಾನರ’ ನಡುವೆ ಬಿರುಕು: ಸೌದಿ ಅರೇಬಿಯಾ vs ಯುಎಇ ಮಹಾಯುದ್ಧ
ಆತ್ಮಹತ್ಯೆ ಯತ್ನದ ವಿವರ:
ನಿಯುಕ್ತಿಗೊಂಡ ದಿನವೇ ಅಮಾನತು ಆದೇಶದಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು, ತುಮಕೂರು ತಾಲೂಕಿನ ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಅಲ್ಲಿ ಅತಿಯಾದ ನಿದ್ರೆ ಮಾತ್ರೆ ಅಥವಾ ವಿಷಕಾರಿ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಪೊಲೀಸರು ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿ ಗಲಭೆ ಪ್ರಕರಣದ ತಲೆದಂಡ:
ಬಳ್ಳಾರಿಯಲ್ಲಿ ನಡೆದ ಶೂಟೌಟ್ ಪ್ರಕರಣವು ಗೃಹ ಇಲಾಖೆಗೆ ದೊಡ್ಡ ಮುಜುಗುರ ತಂದಿತ್ತು. ಘಟನೆ ನಡೆದ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಸ್‌ಪಿ ಪವನ್ ನೆಜ್ಜೂರು ಮತ್ತು ಕೆಲವು ಅಧೀನ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಸರ್ಕಾರ ಶಿಸ್ತು ಕ್ರಮ ಕೈಗೊಂಡಿತ್ತು.



