ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮೈಸೂರಿನ ಪ್ರಮುಖ ರಾಜಕಾರಣಿ
BJP K Ramadas political retirement: ಮೈಸೂರು: ಕಳೆದ ಮೂರು ದಶಕಗಳಿಂದ ಮೈಸೂರಿನ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಸ್. ಎ. ರಾಮದಾಸ್ ಅವರು ಇಂದು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮಹತ್ವದ ನಿರ್ಧಾರವನ್ನು ಪ್ರಕಟಿದರು.
‘ರಾಮಾಯಣ’ದ ಉದಾಹರಣೆ ನೀಡಿದ ರಾಮದಾಸ್
ತಮಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದನ್ನು ಪರೋಕ್ಷವಾಗಿ ನೆನಪಿಸಿಕೊಂಡ ರಾಮದಾಸ್, ರಾಮಾಯಣದ ಪ್ರಸಂಗವನ್ನು ಉಲ್ಲೇಖಿಸಿ ಭಾವುಕರಾದರು.
“ರಾಮನಿಗೆ ಪಟ್ಟಾಭಿಷೇಕ ಆಗಬೇಕಿದ್ದ ಸಂದರ್ಭದಲ್ಲಿ ದಶರಥನ ಮೂಲಕ ಆತನನ್ನು ಕಾಡಿಗೆ ಕಳುಹಿಸಲಾಯಿತು. ಶ್ರೀರಾಮನೇ ಮರುಮಾತನಾಡದೆ ಕಾಡಿಗೆ ಹೋದ ಮೇಲೆ, ಇನ್ನು ನಾನು ಕೇವಲ ‘ರಾಮದಾಸ’, ನಾನೇನು ಮಾಡಲಿ?” ಎಂದು ಪ್ರಶ್ನಿಸಿದರು. “ಊಟಕ್ಕೆ ಕುಳಿತಿದ್ದ ನನ್ನನ್ನು ಅರ್ಧಕ್ಕೆ ಎಬ್ಬಿಸಿ ಬೇರೆಯವರನ್ನು ಕೂರಿಸಿದರು. ನಾನೇ ಅವರಿಗೆ ಊಟ ಬಡಿಸಿದೆ, ನನಗೇನೂ ದುಃಖವಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
30 ವರ್ಷಗಳ ರಾಜಕೀಯ ಪಯಣ
ತಮ್ಮ ರಾಜಕೀಯ ಜೀವನದ ಬಗ್ಗೆ ಮೆಲುಕು ಹಾಕಿದ ಅವರು, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೂ 30 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹಂಚಿಕೊಂಡರು. “ಬಿಜೆಪಿ ನನಗೆ ತಾಯಿ ಇದ್ದಂತೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ರಾಜಕೀಯ ಜೀವನದಲ್ಲಿ ಎಲ್ಲಿಯೂ ಕೈಯನ್ನು ಅಶುದ್ಧ ಮಾಡಿಕೊಂಡಿಲ್ಲ (ಭ್ರಷ್ಟಾಚಾರ ಮಾಡಿಲ್ಲ) ಎಂಬ ತೃಪ್ತಿ ನನಗಿದೆ ಎಂದರು.
ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ: ರೈತರ ಆದಾಯ ವೃದ್ಧಿಗೆ ಭಾರೀ ನೆರವು
ನಿವೃತ್ತಿಗೆ ಕಾರಣವೇನು?
ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವಂತೆ ಹಿತೈಷಿಗಳು ಒತ್ತಾಯಿಸುತ್ತಿದ್ದರೂ, ತಮಗೆ ಈಗ ಚುನಾವಣಾ ರಾಜಕಾರಣ ಸಾಕೆನಿಸಿದೆ ಎಂದು ಅವರು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅಂದಿನಿಂದ ಅಸಮಾಧಾನಗೊಂಡಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡಿದ್ದರು. ಈಗ ಅಧಿಕೃತವಾಗಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆ.



