ಯಲ್ಲಾಪುರ ರಂಜಿತಾ ಹತ್ಯೆ: 10 ವರ್ಷದ ಅನಾಥ ಮಗನ ಬದುಕಿಗೆ ಹಲವರ ಆಸರೆ

Yellapur Hindu Woman Ranjitha Murder Case: ಯಲ್ಲಾಪುರ: ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ದಲಿತ ಮಹಿಳೆ ರಂಜಿತಾ ಹತ್ಯೆ ಪ್ರಕರಣದ ಆರೋಪಿ ರಫೀಕ್ ಪೊಲೀಸರಿಗೆ ಸಿಗುವ ಮುನ್ನವೇ ಸಾವಿಗೆ ಶರಣಾಗಿದ್ದಾನೆ. ವಿವಾಹ ಪ್ರಸ್ತಾಪ ತಿರಸ್ಕರಿಸಿದ ಸಿಟ್ಟಿನಲ್ಲಿ ನಡುರಸ್ತೆಯಲ್ಲೇ ಯುವತಿಯ ಪ್ರಾಣ ತೆಗೆದಿದ್ದ ಈತ, ಬಳಿಕ ತಾನು ಮಾಡಿದ ಕೃತ್ಯಕ್ಕೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ರಾಜ್ಯಾದ್ಯಂತ ಬುಗಿಲೆದ್ದಿದ್ದ ಸಾರ್ವಜನಿಕರ ಆಕ್ರೋಶಕ್ಕೆ ವಿಧಿಯೇ ನ್ಯಾಯ ಒದಗಿಸಿದಂತಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ರಂಜಿತಾಳ ಪಾರ್ಥಿವ ಶರೀರವನ್ನು ಯಲ್ಲಾಪುರದ ಕಾಳಮ್ಮ ಬಡಾವಣೆಗೆ ತರಲಾಯಿತು. ಅಲ್ಲಿಂದ ಮೆರವಣಿಗೆಯ ಮೂಲಕ ಸ್ಥಳೀಯ ರುದ್ರಭೂಮಿಗೆ ಕೊಂಡೊಯ್ದು ಹಿಂದೂ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಸೇರಿದ ನೂರಾರು ಜನರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಮೃತ ರಂಜಿತಾಳ ತಾಯಿ ಭಾಗೀರಥಿ ಅವರ ಆಕ್ರಂದನ ಅಲ್ಲಿ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದ ಹತ್ತು ವರ್ಷದ ಬಾಲಕ ಸಾತ್ವಿಕ್, ಈಗ ತನ್ನನ್ನು ಕಾಯುತ್ತಿದ್ದ ತಾಯಿಯನ್ನೂ ಕಳೆದುಕೊಂಡು ಅನಾಥನಾಗಿದ್ದಾನೆ. ಮಗನ ಭವಿಷ್ಯದ ಬಗ್ಗೆ ಹಲುಬುತ್ತಾ ಕಣ್ಣೀರಿಡುತ್ತಿದ್ದ ಭಾಗೀರಥಿ ಅವರಿಗೆ ಸಾಂತ್ವನ ಹೇಳುವುದು ಯಾರಿಗೂ ಸಾಧ್ಯವಾಗಲಿಲ್ಲ.

ಕರ್ನಾಟಕದಲ್ಲಿ ಈ ವಿಷಯಕ್ಕೆ ಹೊಸ ಕಾನೂನು; ಸಿಎಂ ಸಿದ್ದರಾಮಯ್ಯ ಘೋಷಣೆ

ಬಾಲಕ ಸಾತ್ವಿಕ್‌ನ ಭವಿಷ್ಯದ ಸುರಕ್ಷತೆಗಾಗಿ ಈಗ ಹಲವು ಕೈಗಳು ಒಂದಾಗಿವೆ. ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಐದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು. ಇದೇ ವೇಳೆ ಬಿಜೆಪಿಯ ಹರಿಪ್ರಕಾಶ್ ಕೋಣೆಮನೆ ಅವರು ಮಾನವೀಯತೆ ಮೆರೆದಿದ್ದು, ಸಾತ್ವಿಕ್‌ನ ಉನ್ನತ ಶಿಕ್ಷಣದವರೆಗಿನ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ತಮ್ಮ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮೂಲಕ ಭರಿಸುವುದಾಗಿ ಘೋಷಿಸಿದರು.

ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸರ್ಕಾರದ ಪರವಾಗಿ 8.20 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಬಾಲಕನ ಹೆಸರಿನಲ್ಲೇ ಕುಟುಂಬಕ್ಕೆ ನೀಡಿದರು. ಈ ಭೀಕರ ದುರಂತದ ನಡುವೆಯೂ ಯಲ್ಲಾಪುರದ ಸ್ಥಳೀಯರು ಸಣ್ಣ-ಪುಟ್ಟ ದೇಣಿಗೆ ಸಂಗ್ರಹಿಸಿ ನೊಂದ ಕುಟುಂಬಕ್ಕೆ ನೀಡುವ ಮೂಲಕ ಮಗುವಿನ ಬದುಕಿಗೆ ಭರವಸೆಯ ಬೆಳಕಾಗಲು ಪ್ರಯತ್ನಿಸಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories