ಕರ್ನಾಟಕದಲ್ಲಿ ಈ ವಿಷಯಕ್ಕೆ ಹೊಸ ಕಾನೂನು; ಸಿಎಂ ಸಿದ್ದರಾಮಯ್ಯ ಘೋಷಣೆ

Honour Killing Prevention Law in Karnataka: ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಗರ್ಭಿಣಿ ಮಗಳ ಹತ್ಯೆ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ‘ಮರ್ಯಾದಾ ಹತ್ಯೆ’ (Honour Killing) ತಡೆಗೆ ಪ್ರತ್ಯೇಕ ಮತ್ತು ಕಠಿಣ ಕಾನೂನು ರೂಪಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಮುಖ್ಯಮಂತ್ರಿಗಳು, “ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತಹ ಹೀನ ಕೃತ್ಯಗಳಾಗಿವೆ. ಇಂತಹ ಕ್ರೌರ್ಯವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದುಷ್ಕರ್ಮಿಗಳಲ್ಲಿ ಕಾನೂನಿನ ಭಯ ಹುಟ್ಟಿಸಲು ಮತ್ತು ಸಮಾಜದಲ್ಲಿ ಅರಿವು ಮೂಡಿಸಲು ವಿಶೇಷ ಕಾನೂನಿನ ಅಗತ್ಯವಿದೆ,” ಎಂದು ಪ್ರತಿಪಾದಿಸಿದರು.

ತ್ವರಿತಗತಿ ನ್ಯಾಯಾಲಯ ಸ್ಥಾಪನೆ
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಮಾನ್ಯಾಳ ಹತ್ಯೆ ಪ್ರಕರಣದ ಕುರಿತು ಪ್ರಸ್ತಾಪಿಸಿದ ಸಿಎಂ, ಈ ಕೇಸಿನ ವಿಚಾರಣೆಯನ್ನು ಚುರುಕುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು. “ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಪ್ರಕರಣದ ವಿಚಾರಣೆಗಾಗಿ ‘ತ್ವರಿತಗತಿ ನ್ಯಾಯಾಲಯ’ (Fast Track Court) ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ: ಕಾಂಗ್ರೆಸ್ ಸರ್ಕಾರದ ಅಸಮರ್ಥತೆಗೆ ಸಾಕ್ಷಿ – ಬಿ.ವೈ. ವಿಜಯೇಂದ್ರ ಆಕ್ರೋಶ

ಹಿನ್ನೆಲೆ ಏನು?
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸ್ವಂತ ತಂದೆಯೇ ಆರು ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ಮರ್ಯಾದೆಯ ಹೆಸರಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಇಂತಹ ಅನಿಷ್ಟ ಪದ್ಧತಿಯ ವಿರುದ್ಧ ಕಠಿಣ ಕಾನೂನು ತರಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಈ ಮಹತ್ವದ ಹೆಜ್ಜೆ ಇರಿಸಿದೆ.

ಸರ್ಕಾರದ ಮುಂದಿನ ನಡೆ:
ಮರ್ಯಾದಾ ಹತ್ಯೆ ತಡೆಗೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಮಸೂದೆ ಸಿದ್ಧಪಡಿಸುವುದು. ಇಂತಹ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ನಿಬಂಧನೆಗಳನ್ನು ಅಳವಡಿಸುವುದು. ಗ್ರಾಮೀಣ ಭಾಗಗಳಲ್ಲಿ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸುವುದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories