ಮಂಗಳೂರಿನ ಯುವತಿ ಬೆಂಗಳೂರಿನ ಫ್ಲ್ಯಾಟ್ನಲ್ಲಿ ಉಸಿರುಕಟ್ಟಿ ಸಾವು
Bengaluru fire accident | Crime News Bengaluru: ಬೆಂಗಳೂರು: ಜೀವನದ ಹತ್ತಾರು ಕನಸುಗಳನ್ನು ಹೊತ್ತು ಸಿಲಿಕಾನ್ ಸಿಟಿಗೆ ಬಂದಿದ್ದ ಮಂಗಳೂರು ಮೂಲದ ಯುವತಿಯೊಬ್ಬಳು, ತಾನು ವಾಸವಿದ್ದ ಫ್ಲ್ಯಾಟ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಉಸಿರುಕಟ್ಟಿ ದುರಂತ ಅಂತ್ಯ ಕಂಡಿದ್ದಾರೆ.
ಘಟನೆಯ ವಿವರ:
ಮಂಗಳೂರು ಮೂಲದ 24 ವರ್ಷದ ಶರ್ಮಿಳಾ ಮೃತಪಟ್ಟ ದುರ್ದೈವಿ. ಬೆಂಗಳೂರಿನ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶರ್ಮಿಳಾ, ಸ್ಪುರದ್ರೂಪಿ ಚೆಲುವೆ ಮಾತ್ರವಲ್ಲದೆ ಕೈತುಂಬಾ ಸಂಬಳವನ್ನೂ ಪಡೆಯುತ್ತಿದ್ದರು.
ಒಂಟಿಯಾಗಿದ್ದಾಗ ಬಂದೆರಗಿದ ಸಾವು:
ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಲೇಔಟ್ನ ಫ್ಲ್ಯಾಟ್ವೊಂದರಲ್ಲಿ ಶರ್ಮಿಳಾ ತನ್ನ ಸ್ನೇಹಿತೆಯ ಜೊತೆ ವಾಸವಾಗಿದ್ದರು. ಹೊಸ ವರ್ಷದ ರಜೆಗಾಗಿ ಕಳೆದ ವಾರವಷ್ಟೇ ಮಂಗಳೂರಿಗೆ ಹೋಗಿ ಹೆತ್ತವರನ್ನು ಭೇಟಿಯಾಗಿ ಬಂದಿದ್ದರು. ಆದರೆ ಅದು ಅವರ ಕೊನೆಯ ಭೇಟಿಯಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ.
ಜನವರಿ 3ರ ತಡರಾತ್ರಿ ಸುಮಾರು 10:50ರ ಸಮಯದಲ್ಲಿ ಫ್ಲ್ಯಾಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಶರ್ಮಿಳಾ ಅವರ ರೂಮ್ ಮೇಟ್ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಇವರು ಒಬ್ಬರೇ ಇದ್ದರು.
ಕುಂದಾಪುರ : ಕೆಎಸ್ಆರ್ಟಿಸಿ – ಟಿಪ್ಪರ್ ಢಿಕ್ಕಿ : ಹಲವು ಕಾಲೇಜು ವಿದ್ಯಾರ್ಥಿಗಳು ಗಂಭೀರ
ಅವಘಡಕ್ಕೆ ಕಾರಣವೇನು?
ಮನೆ ತುಂಬಾ ಹೊಗೆ ತುಂಬಿಕೊಂಡ ಪರಿಣಾಮ ನಿದ್ರೆಯಲ್ಲಿದ್ದ ಶರ್ಮಿಳಾ ಹೊರಗೆ ಬರಲಾಗದೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪಾರ್ಟ್ಮೆಂಟ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದರೂ, ಅಷ್ಟರಲ್ಲೇ ಶರ್ಮಿಳಾ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಹೆತ್ತವರಿಗೆ ಆಸರೆಯಾಗಬೇಕಿದ್ದ ಮಗಳು ಈಗ ಹೆಣವಾಗಿ ಮನೆಗೆ ಮರಳುತ್ತಿರುವುದು ಕುಟುಂಬದವರಲ್ಲಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



