ನದಿ ಜೋಡಣೆ ಕೈಬಿಡದಿದ್ದರೆ ಉತ್ತರ ಕನ್ನಡದಲ್ಲಿ ಚುನಾವಣಾ ಬಹಿಷ್ಕಾರ: ಸರ್ಕಾರಕ್ಕೆ ಸ್ವರ್ಣವಲ್ಲೀ ಶ್ರೀಗಳ ಖಡಕ್ ಎಚ್ಚರಿಕೆ!

Bedti Varada- Aghanashini Vedavathi river linking project: ಶಿರಸಿ (ಉತ್ತರ ಕನ್ನಡ): ಬೇಡ್ತಿ- ವರದಾ ಮತ್ತು ಅಘನಾಶಿನಿ ವೇದಾವತಿ ನದಿ ಜೋಡಣೆ ಯೋಜನೆಯ ವಿರುದ್ಧ ಇಂದು ಶಿರಸಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವು ಜಿಲ್ಲೆಯ ಜನರ ತೀವ್ರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಈ ವೇಳೆ ಈ ಯೋಜನೆಗೆ ವಿರೋಧವಾಗಿ ಇಡೀ ಉತ್ತರ ಕನ್ನಡ ಜಿಲ್ಲೆ ಚುನಾವಣಾ ಬಹಿಷ್ಕಾರಕ್ಕೂ ಸಿದ್ಧ ಎಂಬ ಎಚ್ಚರಿಕಾ ಘೋಷಣೆಯೂ ಹೊರಬಿತ್ತು.

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಜಡೆ ಮಠದ ಶ್ರೀಗಳು, ನೆಲೆಮಾವು ಮಠದ ಶ್ರೀಗಳು ಹಾಗೂ ಜೈನ ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುವ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಎಲ್ಲಾ ಸ್ವಾಮೀಜಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು. ಶ್ರೀ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿಗಳು ನದಿ ಜೋಡಣೆ ವಿರೋಧಿಸಿ ಇಡೀ ಜಿಲ್ಲೆಯ ಜನತೆ ಚುನಾವಣಾ ಬಹಿಷ್ಕಾರಕ್ಕೂ ಸಿದ್ಧರಿದ್ದಾರೆ ಎಂದು ಎಲ್ಲಾ ರಾಜಕೀಯ ನಾಯಕರಿಗೆ ಎಚ್ಚರಿಕೆ ರವಾನಿಸಿದರು.

ಪಕ್ಷಾತೀತ ಹೋರಾಟ:
ಈ ಹೋರಾಟದ ವಿಶೇಷವೆಂದರೆ ರಾಜಕೀಯ ಭಿನ್ನಾಭಿಪ್ರಾಯ ಮರೆತು ಜಿಲ್ಲೆಯ ಎಲ್ಲಾ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ್ ಅವರು ಪಾಲ್ಗೊಂಡು ಯೋಜನೆಯ ವಿರುದ್ಧ ಧ್ವನಿ ಎತ್ತಿದರು. ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಜನರ ಬದುಕನ್ನು ನಾಶಮಾಡಿ ನದಿ ಜೋಡಣೆ ಮಾಡುವುದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೇಡ್ತಿ-ವರದಾ ನದಿಜೋಡಣೆ ಯೋಜನೆ ವಿರೋಧಿಸಿ ಭಾರೀ ಹೋರಾಟ; ಕಾರಣವೇನು?

ಯೋಜನೆಗೆ ವಿರೋಧ ಏಕೆ?
ಸರ್ಕಾರವು ಬೇಡ್ತಿ ನದಿಯನ್ನು ವರದಾ ನದಿಗೆ ಹಾಗೂ ಅಘನಾಶಿನಿ ನದಿಯನ್ನು ವೇದಾವತಿ ನದಿಗೆ ಜೋಡಿಸಲು ಯೋಜನೆ ರೂಪಿಸಿದೆ. ಆದರೆ, ಈ ಯೋಜನೆಯಿಂದ:

ಪಶ್ಚಿಮ ಘಟ್ಟದ ಕಾಡುಗಳು ನಾಶವಾಗುತ್ತವೆ.

ಅಪರೂಪದ ಸಸ್ಯಕಾಶಿ ಹಾಗೂ ಪ್ರಾಣಿ ಸಂಕುಲಕ್ಕೆ ಸಂಚಕಾರ ಬರಲಿದೆ.

ಅಘನಾಶಿನಿ ನದಿಯ ನೈಸರ್ಗಿಕ ಹರಿವು ನಿಂತು, ಅದರ ಶುದ್ಧತೆ ಕೆಡಲಿದೆ.

ಸ್ಥಳೀಯ ಕೃಷಿಕರು ಮತ್ತು ಮೀನುಗಾರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಸಾಗರೋಪಾದಿಯಲ್ಲಿ ಹರಿದುಬಂದ ಜನಸಾಗರ:
ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯ ಸಾವಿರಾರು ಜನರು ಭಾಗವಹಿಸಿದ್ದರು. ಶಿರಸಿ ನಗರದ ರಸ್ತೆಗಳೆಲ್ಲವೂ “ಬೇಡ್ತಿ- ಅಘನಾಶಿನಿ ಉಳಿಸಿ” ಎಂಬ ಘೋಷಣೆಗಳಿಂದ ಮೊಳಗಿದವು. ಪಶ್ಚಿಮ ಘಟ್ಟದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಈ ಹೋರಾಟ ಅನಿವಾರ್ಯ ಎಂಬ ನಿರ್ಧಾರ ಹೊರಹೊಮ್ಮಿತು. ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಸರ್ಕಾರ ಈ ಯೋಜನೆಯನ್ನು ಮುಂದುವರಿಸುತ್ತದೆಯೇ ಅಥವಾ ಜನರ ಭಾವನೆಗಳಿಗೆ ಮನ್ನಣೆ ನೀಡಿ ಯೋಜನೆಯನ್ನು ಕೈಬಿಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories