ಚಿಕ್ಕಬಳ್ಳಾಪುರ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ:

Chikkaballapur R*ape Case: ಚಿಕ್ಕಬಳ್ಳಾಪುರ: ಜಿಲ್ಲೆಯ ಪೆರೇಸಂದ್ರದಲ್ಲಿ ಮಾನವೀಯತೆಯನ್ನೇ ಮರೆಸುವಂತಹ ಕೃತ್ಯವೊಂದು ನಡೆದಿದೆ. ಕಾಲೇಜು ಮುಗಿಸಿ ಮನೆಗೆ ಮರಳಲು ಬಸ್ಸಿಗಾಗಿ ಕಾಯುತ್ತಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಲಿಫ್ಟ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘನಘೋರ ಘಟನೆ ಸೋಮವಾರ ವರದಿಯಾಗಿದೆ.
ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ, ಸೋಮವಾರ ಸಂಜೆ ತಾಲೂಕಿನ ಪೆರೇಸಂದ್ರ ಕ್ರಾಸ್ ಬಳಿ ತನ್ನ ಸ್ವಗ್ರಾಮಕ್ಕೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿ ಗಣೇಶ್ ಎಂಬಾತ, ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ಆಕೆಯನ್ನು ಗ್ರಾಮಕ್ಕೆ ಕರೆದೊಯ್ಯುವ ಬದಲು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ತನ್ನ ಕಾಮದ ಹಸಿವನ್ನು ತೀರಿಸಿಕೊಂಡಿದ್ದಾನೆ.
ಸ್ನೇಹಿತನಿಗೆ ಫೋನ್ ಮಾಡಿ ಸಿಕ್ಕಿಬಿದ್ದ ಆರೋಪಿ:
ಕೃತ್ಯ ಎಸಗಿದ ಬಳಿಕ ಭಯಭೀತನಾದ ಆರೋಪಿ ಗಣೇಶ್, ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಎಚ್ಚೆತ್ತ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಆರೋಪಿಯ ಮೊಬೈಲ್ ಲೊಕೇಶನ್ ಆಧರಿಸಿ ಪೆರೇಸಂದ್ರ ಪೊಲೀಸರು ರಾತ್ರೋರಾತ್ರಿ ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ, ಸಂತ್ರಸ್ತೆ ಮತ್ತು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅನಾಥ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ:
ತಂದೆಯನ್ನು ಕಳೆದುಕೊಂಡಿದ್ದ ಸಂತ್ರಸ್ತೆ, ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಘಟನೆಯಿಂದ ಆಕೆ ತೀವ್ರ ಆಘಾತಕ್ಕೊಳಗಾಗಿದ್ದು, ಸದ್ಯ ಆಕೆಯನ್ನು ಸರ್ಕಾರಿ ಬಾಲಮಂದಿರಕ್ಕೆ ರಕ್ಷಣೆಗಾಗಿ ದಾಖಲಿಸಲಾಗಿದೆ. ಇನ್ನು ಬಂಧಿತ ಆರೋಪಿ ಗಣೇಶನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಸಂಚಾರಿ ನಿಯಮ ಉಲ್ಲಂಘನೆ ತಡೆಗೆ ಹೊಸ ಅಸ್ತ್ರ : ಇನ್ಮುಂದೆ ದಂಡದ ಜೊತೆ ಎಫ್ಐಆರ್
ಪೋಕ್ಸೋ ಅಡಿ ಪ್ರಕರಣ ದಾಖಲು:
ಆರೋಪಿಯ ವಿರುದ್ಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆ ಪಡೆದು ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ.
ಸಾರ್ವಜನಿಕ ಗಮನಕ್ಕೆ: ಅಪರಿಚಿತರನ್ನು ನಂಬಿ ವಾಹನ ಹತ್ತುವ ಮೊದಲು ಜಾಗರೂಕರಾಗಿರಿ. ತುರ್ತು ಸಂದರ್ಭದಲ್ಲಿ ಪೊಲೀಸರ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ.



