ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಖಾಕಿ ಮುಂದಾಗಿದೆ. ದಂಡ ಕಟ್ಟಿದ್ರೆ ಆಯ್ತು ಎಂಬ ನಿರ್ಲಕ್ಷ್ಯದೊಂದಿಗೆ ಅನಾಯಾಸವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರ ಮೇಲೆ ಇನ್ಮುಂದೆ ಹೊಸ ಅಸ್ತ್ರ ಪ್ರಯೋಗಕ್ಕೆ ಸಂಚಾರಿ ಠಾಣಾ ಪೊಲೀಸರು ಮುಂದಾಗಿದ್ದಾರೆ.
ಸಿಗ್ನಲ್ ಜಂಪ್, ತಪ್ಪಾದ ದಿಕ್ಕುಗಳಲ್ಲಿ ವಾಹನ ಚಾಲನೆ ಸೇರಿದಂತೆ ವಾಹನ ಸವಾರರ ಸಣ್ಣ ಸಣ್ಣ ತಪ್ಪುಗಳಿಗೂ ಇನ್ಮುಂದೆ ದಂಡದ ಜೊತೆಯಲ್ಲಿ ಎಫ್ಐಆರ್ ದಾಖಲಾಗಲಿದೆ. ಇದು ಮಾತ್ರವಲ್ಲದೇ ಪೊಲೀಸರು ಸ್ಥಳದಲ್ಲೇ ನಿಮ್ಮ ವಾಹನವನ್ನು ಜಪ್ತಿ ಮಾಡಲೂಬಹುದು. ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಈ ನಿಯಮ ಜಾರಿಗೆ ಬಂದಿದೆ.
ದಂಡ ಹಾಕುವ ಪ್ರಕ್ರಿಯೆಯು ವಾಹನ ಸವಾರರಲ್ಲಿ ಯಾವುದೇ ರೀತಿಯ ಭಯ ಹುಟ್ಟಿಸುತ್ತಿಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಟ್ರಾಫಿಕ್ ನಿಯಮ ಮೀರುತ್ತಿರುವುದು ಅನೇಕ ಕಡೆಗಳಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ದಿಶೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಶಾಕ್ : ಸೇವಾ ಶುಲ್ಕ ದರದಲ್ಲಿ ಮತ್ತೆ ಏರಿಕೆ
2025ರ ಜನವರಿ ತಿಂಗಳಿನಿಂದ ನವೆಂಬರ್ ಅಂತ್ಯದವರೆಗೆ ಸುಮಾರು 6.62 ಲಕ್ಷ ಸಿಗ್ನಲ್ ಜಂಪ್ ಪ್ರಕರಣ ಹಾಗೂ 3.02 ಲಕ್ಷ ನಿರ್ಬಂಧಿತ ರಸ್ತೆಗಳಲ್ಲಿ ಸಂಚಾರ ಪ್ರಕರಣಗಳು ವರದಿಯಾಗಿದೆ. ಸಂಚಾರ ಉಲ್ಲಂಘನೆ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ವಾಹನ ಜಪ್ತಿ ಹಾಗೂ ಎಫ್ಐಆರ್ನಂತ ಕಠಿಣ ಕ್ರಮಗಳಿಗೆ ಮೊರೆ ಹೋಗುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.



