ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಡಿಪಿಆರ್ಗಳಿಗೆ ಯೋಜನೆಗಳಿಗೆ ಕೇಂದ್ರದ ಅನುಮೋದನೆ
ಮಳೆಗಾಲದ ಸಂದರ್ಭದಲ್ಲಿ ಅಕ್ಷರಶಃ ನರಕದಂತೆ ಭಾಸವಾಗುತ್ತಿದ್ದ ಮಂಗಳೂರು ಬೈಪಾಸ್, ಸುರತ್ಕಲ್ – ಬಿ.ಸಿ ರೋಡುಗಳ ರಸ್ತೆ ಅಭಿವೃದ್ಧಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲಾ ಜನತೆಗೆ ಗುಡ್ ನ್ಯೂಸ್ ನೀಡಿದ್ದು, ಈ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ನೀಡಿದೆ. ಇದರಿಂದ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ದೊರಕಿದೆ.
ಅನುಮೋದನೆ ಪಡೆದುಕೊಂಡ ಯೋಜನೆಯ ಅನುಸಾರ, 35 ಕಿಲೋ ಮೀಟರ್ ವ್ಯಾಪ್ತಿಯ ಮಂಗಳೂರು ಬೈಪಾಸ್ ನಿರ್ಮಾಣ, ಸುರತ್ಕಲ್ನಿಂದ ಬಿ.ಸಿ ರೋಡಿನವರೆಗೆ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ ಹಾಗೂ ತಲಪಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣಗೊಳ್ಳಲಿವೆ.
ಈ ವಿಚಾರವಾಗಿ ಮಾತನಾಡಿ ಸಂತಸ ವ್ಯಕ್ತಪಡಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಳೆಗಾಲದ ಸಂದರ್ಭದಲ್ಲಿ ಈ ರಸ್ತೆಗಳಲ್ಲಿ ವಾಹನ ಸಂಚಾರ ಬಹಳ ಕಷ್ಟವಿತ್ತು. ಇದರಿಂದ ಮಂಗಳೂರು ಭಾಗದ ಮೂಲಸೌಕರ್ಯಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೆ. ಇದರ ಫಲವಾಗಿ ಈಗ ಮೂರು ಯೋಜನೆಗಳ ಡಿಪಿಆರ್ಗಳಿಗೆ ಅನುಮೋದನೆ ದೊರಕಿರುವುದು ಅತ್ಯಂತ ಸಂತಸ ತಂದಿದೆ ಎಂದು ಹೇಳಿದ್ದಾರೆ.



