ಧರ್ಮಸ್ಥಳ ಅಸ್ಥಿಪಂಜರ ಪ್ರಕರಣ: ಬೆಂಗಳೂರು ಎಫ್‌ಎಸ್‌ಎಲ್‌ಗೆ ಏಳು ಅಸ್ಥಿಪಂಜರಗಳ ರವಾನೆ

Dharmasthala mass burial case SIT Investigation Update: ಮಂಗಳೂರು: ಧರ್ಮಸ್ಥಳದ ಸಮೀಪವಿರುವ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಏಳು ಮಾನವ ಅಸ್ಥಿಪಂಜರಗಳ ರಹಸ್ಯ ಭೇದಿಸಲು ಎಸ್‌ಐಟಿ (SIT) ಅಧಿಕಾರಿಗಳು ಈಗ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಹೆಚ್ಚಿನ ತನಿಖೆ ಮತ್ತು ವೈಜ್ಞಾನಿಕ ಪರೀಕ್ಷೆಗಾಗಿ ಈ ಅಸ್ಥಿಪಂಜರಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಈ ಕುರಿತು ಟಿವಿ9 ಡಿಜಿಟಲ್‌ ವರದಿ ಮಾಡಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ (ಸೆ. 17 ಮತ್ತು 18, 2025) ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್‌ಐಟಿ ತಂಡ ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿದಾಗ ಒಟ್ಟು ಏಳು ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಮತ್ತು ಷಡ್ಯಂತ್ರದ ಆರೋಪಗಳ ಬೆನ್ನಲ್ಲೇ ಈ ಅಸ್ಥಿಪಂಜರಗಳು ಸಿಕ್ಕಿದ್ದು ಭಾರಿ ಕುತೂಹಲ ಕೆರಳಿಸಿತ್ತು.

ಕೊಡಗು ಮೂಲದ ಅಯ್ಯಪ್ಪ ಗುರುತು ಪತ್ತೆ?

ಪತ್ತೆಯಾದ ಏಳು ಬುರುಡೆಗಳ ಪೈಕಿ ಒಂದು ಬುರುಡೆ ಕೊಡಗು ಮೂಲದ ಯು.ಬಿ. ಅಯ್ಯಪ್ಪ ಎಂಬುವವರದ್ದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ನಡೆಯಲು ಬಳಸುವ ಮೂರು ಕಾಲುಗಳ ‘ವಾಕಿಂಗ್ ಸ್ಟಿಕ್’ ಪತ್ತೆಯಾಗಿತ್ತು. ಕೊಡಗಿನ ಪೊನ್ನಂಪೇಟೆ ತಾಲೂಕಿನ ಅಯ್ಯಪ್ಪ ಅವರು ಏಳು ವರ್ಷಗಳ ಹಿಂದೆ ಮೈಸೂರಿಗೆ ಚಿಕಿತ್ಸೆಗೆಂದು ತೆರಳಿದ್ದಾಗ ನಾಪತ್ತೆಯಾಗಿದ್ದರು. ಅವರ ಕುಟುಂಬಸ್ಥರು ಈ ಹಿಂದೆ ನೀಡಿದ್ದ ದೂರಿನಲ್ಲಿ ವಾಕಿಂಗ್ ಸ್ಟಿಕ್ ಬಳಕೆಯ ಬಗ್ಗೆ ಉಲ್ಲೇಖಿಸಿದ್ದರು. ಇದು ಎಸ್‌ಐಟಿ ತನಿಖೆಗೆ ಪ್ರಮುಖ ಸುಳಿವು ನೀಡಿದೆ.

Brahmavara: ಕರವೇ ಮುಖಂಡ ಪ್ರವೀಣ್​ ವಿರುದ್ಧ ಹಲ್ಲೆ ಆರೋಪ : ಸುಷ್ಮಾ ಗೌಡ ವಿಚಾರಕ್ಕೆ ನಡೀತಾ ಡೆಡ್ಲಿ ಫೈಟ್​ !

ಎಫ್‌ಎಸ್‌ಎಲ್ ವರದಿಯ ನಿರೀಕ್ಷೆ

ಅಸ್ಥಿಪಂಜರಗಳು ಎಷ್ಟು ವರ್ಷಗಳ ಹಳೆಯವು? ಇವರೆಲ್ಲರ ಸಾವು ಸಹಜವೇ ಅಥವಾ ಇದರ ಹಿಂದೆ ಯಾವುದಾದರೂ ಕ್ರಿಮಿನಲ್ ಸಂಚಿದೆಯೇ? ಎಂಬುದನ್ನು ತಿಳಿಯಲು ಮಡಿವಾಳದ ಎಫ್‌ಎಸ್‌ಎಲ್ ವರದಿ ಅತ್ಯಂತ ನಿರ್ಣಾಯಕವಾಗಿದೆ. ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ಅಸ್ಥಿಪಂಜರಗಳನ್ನು ಅಲ್ಲಿ ತಂದು ಹಾಕಲಾಗಿದೆಯೇ ಅಥವಾ ಇದು ಹಳೆಯ ನಾಪತ್ತೆ ಪ್ರಕರಣಗಳ ಭಾಗವೇ ಎಂಬುದು ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories