ಗಣರಾಜ್ಯೋತ್ಸವ ಭಾಷಣ ಓದಲ್ವಾ ರಾಜ್ಯಪಾಲರು? ಕರ್ನಾಟಕ ಸರ್ಕಾರದ ಮುಂದಿನ ನಡೆಯೇನು?

Karnataka Government vs Governor| Republic Day Speech: ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಜನವರಿ 26ರ ಗಣರಾಜ್ಯೋತ್ಸವದಂದು ರಾಜ್ಯಪಾಲರು ಓದಬೇಕಿರುವ ಭಾಷಣದ ಕರಡು ಪ್ರತಿ ಈಗ ಸಂಘರ್ಷಕ್ಕೆ ಕಿಡಿ ಹಚ್ಚಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳಿರುವುದು ರಾಜ್ಯಪಾಲರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯ ಸರ್ಕಾರ ನೀಡಿರುವ ಭಾಷಣದ ಪ್ರತಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯ, ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಮತ್ತು ಕೇಂದ್ರದ ಕೆಲವು ನೀತಿಗಳನ್ನು ಕಟುವಾಗಿ ವಿಮರ್ಶಿಸಲಾಗಿದೆ. “ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ” ಎಂಬಂತಹ ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಕೇಂದ್ರವನ್ನು ಟೀಕಿಸುವ ಇಂತಹ ಅಂಶಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಒಂದು ವೇಳೆ ಸರ್ಕಾರ ಭಾಷಣದಲ್ಲಿ ತಿದ್ದುಪಡಿ ಮಾಡದಿದ್ದರೆ, ತಾವೇ ಸ್ವತಂತ್ರವಾಗಿ ಸಿದ್ಧಪಡಿಸಿದ ಭಾಷಣವನ್ನು ಓದುವುದಾಗಿ ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇದೇ ರೀತಿಯ ಹೈಡ್ರಾಮಾ ನಡೆದಿತ್ತು. ಆಗ ಸರ್ಕಾರ ನೀಡಿದ ಸುದೀರ್ಘ ಭಾಷಣವನ್ನು ಓದಲು ನಿರಾಕರಿಸಿದ್ದ ರಾಜ್ಯಪಾಲರು, ಕೇವಲ ಮೊದಲ ಮತ್ತು ಕೊನೆಯ ಸಾಲುಗಳನ್ನು ಓದಿ ಸಭೆಯಿಂದ ನಿರ್ಗಮಿಸಿದ್ದರು. ಆ ಘಟನೆಯ ಬೆನ್ನಲ್ಲೇ ಈಗ ಗಣರಾಜ್ಯೋತ್ಸವದ ಭಾಷಣದ ವಿಚಾರ ಬಂದಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಟ್ರಾಫಿಕ್‌ ಸಮಸ್ಯೆಯಲ್ಲಿ ಬೆಂಗಳೂರೇ ಫಸ್ಟ್‌: ಟ್ರಾಫಿಕ್‌ ಜಾಮ್‌ನಿಂದ ಇಲ್ಲಿ ವೇಸ್ಟ್‌ ಆಗುವ ಸಮಯ ಎಷ್ಟು ಗೊತ್ತಾ?

ಸಂಪ್ರದಾಯದ ಪ್ರಕಾರ ಗಣರಾಜ್ಯೋತ್ಸವದಂದು ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ಮತ್ತು ಮುಂದಿನ ಯೋಜನೆಗಳನ್ನು ಶ್ಲಾಘಿಸಿ ಭಾಷಣ ಮಾಡಬೇಕು. ಆದರೆ, ಈ ಬಾರಿ ಸರ್ಕಾರವು ರಾಜ್ಯಪಾಲರ ಮೂಲಕವೇ ಕೇಂದ್ರದ ವಿರುದ್ಧ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇದಕ್ಕೆ ರಾಜ್ಯಪಾಲರು ಮಣಿಯದ ಕಾರಣ, ಜನವರಿ 26ರಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರು ಯಾವ ಭಾಷಣ ಮಾಡಲಿದ್ದಾರೆ ಎಂಬುದು ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories