ಮಹಿಳೆಯರು ಪಕ್ಷದ ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಿಸಬೇಡಿ; ಕಾಂಗ್ರೆಸ್ ನಾಯಕಿ ಮೋಟಮ್ಮ
C Motamma | Karnataka Politics: ಮಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಯಸುವ ಮಹಿಳೆಯರು ಕೇವಲ ಗ್ಲಾಮರ್ ಅಥವಾ ಪ್ರಭಾವಿ ನಾಯಕರ ಓಲೈಕೆಗೆ ಮಾರುಹೋಗಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಅವರು ಕಟುವಾದ ಮಾತುಗಳಲ್ಲಿ ಎಚ್ಚರಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಮಹಿಳಾ ಮಂಡಲಗಳ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರಿಬೇವಿನಂತೆ ಬಳಸಿಕೊಳ್ಳುತ್ತಿದ್ದಾರೆ
ಎಲ್ಲಾ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ ಅಥವಾ ಅಡುಗೆಗೆ ಪರಿಮಳ ನೀಡುವ ‘ಕರಿಬೇವಿನಂತೆ’ ಬಳಸಿಕೊಳ್ಳುತ್ತಿವೆಯೇ ಹೊರತು, ನಿಜವಾದ ಅಧಿಕಾರ ನೀಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಶೇ. 50ರಷ್ಟು ಮತದಾರರಿದ್ದರೂ, ನಿರ್ಧಾರ ಕೈಗೊಳ್ಳುವ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸ್ವಂತ ಕಾಲ ಮೇಲೆ ನಿಲ್ಲಿ
ಮಹಿಳಾ ಕಾರ್ಯಕರ್ತೆಯರು ಮತ್ತು ನಾಯಕಿಯರು ಪಕ್ಷದ ಮುಖಂಡರ ಮುಂದೆ ಕೈಕಟ್ಟಿ ನಿಲ್ಲುವ ಸಂಸ್ಕೃತಿಯನ್ನು ಬಿಡಬೇಕು. “ನಾಯಕರ ಮುಂದೆ ಹಲ್ಲು ಕಿರಿಯುವುದನ್ನು ಬಿಟ್ಟು, ನಿಮ್ಮ ಕೆಲಸದ ಮೂಲಕ ಶಕ್ತಿ ಪ್ರದರ್ಶಿಸಿ. ನಾಯಕರೇ ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರುವಂತೆ ನೀವು ಬೆಳೆಯಬೇಕು” ಎಂದು ಅವರು ಕರೆ ನೀಡಿದರು.
ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಸಚಿವ ಲಕ್ಷ್ಮೀ ಹೆಬ್ಬಾಳಕರ್
ಸಿನಿಮಾ ಸಂಸ್ಕೃತಿ ಮತ್ತು ತಾಯಂದಿರ ಜವಾಬ್ದಾರಿ
ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳು ಮತ್ತು ಬದಲಾಗುತ್ತಿರುವ ಮನಸ್ಥಿತಿಗೆ ತಾಯಂದಿರೇ ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆ ಎಂದು ಮೋಟಮ್ಮ ಹೇಳಿಕೆ ನೀಡಿದರು. ಹೆಣ್ಣುಮಕ್ಕಳಿಗೆ ಕೇವಲ ಸಿನಿಮಾ ನಟಿಯರಂತೆ ಉಡುಗೆ ತೊಡುಗೆ ತೊಡುವುದನ್ನು ಕಲಿಸುವುದಕ್ಕಿಂತ, ಮಾನಸಿಕವಾಗಿ ಗಟ್ಟಿಯಾಗುವುದನ್ನು ಮತ್ತು ಸ್ವಾವಲಂಬಿಗಳಾಗುವುದನ್ನು ಕಲಿಸಿಕೊಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.



