ದೇಶಾದ್ಯಂತ ಇಂದು ಓಲಾ, ಉಬರ್ ಮುಷ್ಕರ; ಆಟೋ-ಕ್ಯಾಬ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ
Ola Uber Strike Today: ನವದೆಹಲಿ: ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳಾದ ಓಲಾ (Ola), ಉಬರ್ (Uber) ಮತ್ತು ರಾಪಿಡೋ (Rapido) ಚಾಲಕರು ಇಂದು (ಫೆಬ್ರವರಿ 7, ಶನಿವಾರ) ದೇಶಾದ್ಯಂತ 6 ಗಂಟೆಗಳ ಕಾಲ ಮುಷ್ಕರ ನಡೆಸಲಿದ್ದಾರೆ. ‘ಆಲ್ ಇಂಡಿಯಾ ಬ್ರೇಕ್‌ಡೌನ್’ (All India Breakdown) ಹೆಸರಿನಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಮಧ್ಯಾಹ್ನದ ಅವಧಿಯಲ್ಲಿ ಪ್ರಯಾಣಿಕರಿಗೆ ಕ್ಯಾಬ್ ಮತ್ತು ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಮುಷ್ಕರಕ್ಕೆ ಪ್ರಮುಖ ಕಾರಣಗಳೇನು?
ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (TGPWU) ನೇತೃತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಚಾಲಕರು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
- ಕನಿಷ್ಠ ದರ ನಿಗದಿ: ಸರ್ಕಾರವು ಕೂಡಲೇ ಕನಿಷ್ಠ ಮೂಲ ದರವನ್ನು (Minimum Base Fare) ನಿಗದಿಪಡಿಸಬೇಕು. ಕಂಪನಿಗಳು ತಮಗಿಷ್ಟ ಬಂದಂತೆ ದರ ನಿಗದಿಪಡಿಸುವುದರಿಂದ ಚಾಲಕರ ಆದಾಯ ಕುಸಿಯುತ್ತಿದೆ ಎಂಬುದು ಅವರ ಆರೋಪ.
- ಖಾಸಗಿ ವಾಹನಗಳ ದುರ್ಬಳಕೆಗೆ ತಡೆ: ವಾಣಿಜ್ಯ ಉದ್ದೇಶಗಳಿಗಾಗಿ (Commercial use) ಖಾಸಗಿ (White board) ವಾಹನಗಳನ್ನು ಬಳಸುವುದನ್ನು ತಡೆಯಬೇಕು. ಇದರಿಂದ ಪರವಾನಗಿ ಪಡೆದ ವಾಣಿಜ್ಯ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಯೂನಿಯನ್ ಹೇಳಿದೆ.
- ಅತಿರೇಕದ ಶೋಷಣೆ: “ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025” ಜಾರಿಯಲ್ಲಿದ್ದರೂ, ಕಂಪನಿಗಳು ಚಾಲಕರನ್ನು ಶೋಷಿಸುತ್ತಿವೆ ಮತ್ತು ಅವರಿಗೆ ಸರಿಯಾದ ಆದಾಯ ಭದ್ರತೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರಯಾಣಿಕರ ಮೇಲೆ ಪರಿಣಾಮ:
ಇಂದು ಚಾಲಕರು 6 ಗಂಟೆಗಳ ಕಾಲ ಆ್ಯಪ್‌ಗಳಿಂದ ಲಾಗ್-ಔಟ್ (Offline) ಆಗಲಿದ್ದಾರೆ. ಇದರಿಂದಾಗಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿಗಳ ಲಭ್ಯತೆ ಕಡಿಮೆಯಾಗಲಿದೆ. ಪ್ರಯಾಣದ ದರದಲ್ಲಿ (Surge pricing) ಏರಿಕೆಯಾಗುವ ಸಾಧ್ಯತೆಯೂ ಇದೆ.
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ
ಗಿಗ್ ಕಾರ್ಮಿಕರ ಸ್ಥಿತಿಗತಿ:
ಇತ್ತೀಚೆಗೆ ಬಿಡುಗಡೆಯಾದ 2025-26ರ ಆರ್ಥಿಕ ಸಮೀಕ್ಷೆಯೂ ಸಹ ಗಿಗ್ ಕಾರ್ಮಿಕರ ಆದಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಮೀಕ್ಷೆಯ ಪ್ರಕಾರ, ಸುಮಾರು 40% ಗಿಗ್ ಕಾರ್ಮಿಕರು ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ದೇಶದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ 1.2 ಕೋಟಿಗೆ ಏರಿಕೆಯಾಗಿದ್ದರೂ, ಅವರ ಆರ್ಥಿಕ ಭದ್ರತೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ನೀವು ಇಂದು ಹೊರಗೆ ಹೋಗುವ ಪ್ಲಾನ್ ಮಾಡಿದ್ದರೆ, ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು (ಮೆಟ್ರೋ ಅಥವಾ ಬಿಎಂಟಿಸಿ ಬಸ್) ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.



