ಸಿಎಂಗೆ ಧೈರ್ಯವಿದ್ದರೆ 2 ವರ್ಷ ಮೆಟ್ರೋ ದರ ಏರಿಕೆ ಮಾಡಲ್ಲ’ ಎಂದು ಘೋಷಿಸಲಿ: ಆರ್ ಅಶೋಕ್ ಆಗ್ರಹ

ಬೆಂಗಳೂರು: ಮೆಟ್ರೋ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರ ತಾರಕಕ್ಕೇರಿದೆ. “ಮೆಟ್ರೋ ದರ ಏರಿಕೆ ಮಾಡಿರುವುದು ರಾಜ್ಯ ಸರ್ಕಾರದ ಅಧೀನದ ಅಧಿಕಾರಿಗಳೇ ಹೊರತು ಕೇಂದ್ರವಲ್ಲ. ಅನಾಚಾರ ಮಾಡಿ ಮನೆ ಮುಂದೆ ಬೃಂದಾವನ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಕೇಂದ್ರದ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದರ ಏರಿಕೆ ನಿರ್ಧಾರ ರಾಜ್ಯದ್ದು:

“ಫೆಬ್ರವರಿಯಲ್ಲಿ ಮೆಟ್ರೋ ದರ ಏರಿಕೆ ಮಾಡಲು ಆದೇಶ ಇರುವುದು ರಾಜ್ಯ ಸರ್ಕಾರದ ಹಂತದಲ್ಲಿ. ಮೆಟ್ರೋ ಎಂ.ಡಿ. ಅವರು ರಾಜ್ಯ ಸರ್ಕಾರದ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೇವಲ ಮಾನಿಟರಿಂಗ್ ಬಾಡಿ ಅಷ್ಟೇ. ಕೇಂದ್ರದ ಅನುಮೋದನೆ ಪಡೆಯದೆ ರಾಜ್ಯವೇ ಈ ಕ್ರಮಕ್ಕೆ ಮುಂದಾಗಿದೆ. ಧೈರ್ಯವಿದ್ದರೆ ‘ಮುಂದಿನ 2 ವರ್ಷ ದರ ಏರಿಕೆ ಮಾಡಲ್ಲ’ ಎಂದು ಸಿಎಂ ಕೇಂದ್ರಕ್ಕೆ ಪತ್ರ ಬರೆಯಲಿ” ಎಂದು ಅಶೋಕ್ ಸವಾಲು ಹಾಕಿದರು.

ಶ್ವೇತಪತ್ರ ಬಿಡುಗಡೆಗೆ ಆಗ್ರಹ:

ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, “ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ರೈಲ್ವೆ ಇಲಾಖೆಗೆ ಕೇಂದ್ರದಿಂದ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲಿ. ಮನಮೋಹನ್ ಸಿಂಗ್ ಅವಧಿಗಿಂತ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಹೆಚ್ಚಿನ ಹಣ ನೀಡಿದ್ದಾರೆ” ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಒಂದೇ ಅಂತಸ್ತನ್ನು 25 ಜನರಿಗೆ ಮಾರಿದ 32nd Avenue ಸಿಇಒ ಬಂಧನ!

ಕಾಂಗ್ರೆಸ್ ಒಳಜಗಳ ಮತ್ತು ಹೈಕಮಾಂಡ್ ವೀಕ್:

“ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಶಾಸಕರೆಲ್ಲರೂ ಜ್ಯೋತಿಷಿಗಳಂತೆ ಭವಿಷ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಎದುರಲ್ಲೇ ಡಿ.ಕೆ. ಶಿವಕುಮಾರ್ ಪರ ಘೋಷಣೆ ಕೂಗಿಸಲಾಗುತ್ತಿದೆ. ಇದನ್ನು ಬಗೆಹರಿಸಲು ದೆಹಲಿ ಹೈಕಮಾಂಡ್‌ಗೆ ತಾಕತ್ತಿಲ್ಲ, ಅವರು ವೀಕ್ ಆಗಿದ್ದಾರೆ” ಎಂದು ಲೇವಡಿ ಮಾಡಿದರು.

ತೆರಿಗೆ ಹಣ ಮೋಜು-ಮಸ್ತಿಗೆ:

“ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದ ಈ ಸರ್ಕಾರ, ನಿಗಮ ಮಂಡಳಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ನೀಡಿ ಜನರ ತೆರಿಗೆ ಹಣವನ್ನು ಮೋಜು-ಮಸ್ತಿಗೆ ಬಳಸುತ್ತಿದೆ. ಇದರ ಬಗ್ಗೆ ರಾಜ್ಯಪಾಲರು ಕೂಡ ವಿವರಣೆ ಕೇಳಿದ್ದಾರೆ. ಬಡವರ ರೇಷನ್ ಕಾರ್ಡ್ ಕಟ್ ಮಾಡುತ್ತಿರುವ ಈ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ” ಎಂದು ಅಶೋಕ್ ಕಿಡಿಕಾರಿದರು.

Bengaluru Namme Metro Price Hike | Congress vs BJP

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories