ಅಪ್ರಾಪ್ತ ಬಾಲಕಿಯರು ಹಾಗೂ ಇಬ್ಬರು ಮಹಿಳೆಯರ ರಕ್ಷಣೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಅಕ್ಕಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಟಪಾಡಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕಿಯರು ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ.
ಉಡುಪಿ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಅಕ್ಕಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಟಪಾಡಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕಿಯರು ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ.
ಸುಮಾರು 3 ಮತ್ತು 10 ವರ್ಷದ ಬಾಲಕಿಯರು, ಅವರ ತಾಯಿ ಹಾಗೂ ದೊಡ್ಡಮ್ಮ ಸೇರಿದಂತೆ ನಾಲ್ವರು ಕಟಪಾಡಿ ಬಸ್ಸು ನಿಲ್ದಾಣದಲ್ಲೇ ಅನಾರೋಗ್ಯಕರ ಹಾಗೂ ಅಸುರಕ್ಷಿತ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದರು. ಇವರ ಪರಿಸ್ಥಿತಿಯನ್ನು ಗಮನಿಸಿದ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ವರನ್ನೂ ರಕ್ಷಿಸಿದರು.
ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ಸಮಿತಿಯ ಆದೇಶದಂತೆ ಮಕ್ಕಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಯಿತು. ಮಕ್ಕಳ ತಾಯಿ ಮತ್ತು ಇಬ್ಬರು ಬಾಲಕಿಯರನ್ನು ಕೂಸಮ್ಮ ಶಂಭು ಶೆಟ್ಟಿ – ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವಿನಿಂದ ದಾಖಲಿಸಲಾಯಿತು.
Also Read: ಐದು ರೂಪಾಯಿ ಅಂಚೆ ಲಕೋಟೆಯ ಪತ್ರ ವಿಳಂಬ: ದೂರು ನೀಡುತ್ತಿದ್ದಂತೆಯೇ ಚುರುಕಾದ ಅಂಚೆ ಇಲಾಖೆ
ಮಕ್ಕಳ ದೊಡ್ಡಮ್ಮಳಿಗೆ ಕ್ಷಯರೋಗದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಮಗ್ರ ತಪಾಸಣಾ ವರದಿ ಬಂದ ನಂತರ ಮಕ್ಕಳಿಗೆ ಅಗತ್ಯ ಚಿಕಿತ್ಸೆ, ಪುನರ್ವಸತಿ ಅಥವಾ ಸಂಬಂಧಿಕರಿಗೆ ಒಪ್ಪಿಸುವ ಕುರಿತು ಕಾನೂನು ಪ್ರಕ್ರಿಯೆಯನ್ನು ಇಲಾಖೆ ಮುಂದಿನ ಹಂತದಲ್ಲಿ ಕೈಗೊಳ್ಳಲಿದೆ.
ಈ ಕಾರ್ಯಾಚರಣೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ ಹಾಗೂ ಸದಸ್ಯರಾದ ಮಿತ್ರಕುಮಾರ್ ಮತ್ತು ಅನಿತಾ ಭಾಗವಹಿಸಿದ್ದರು.
Protection of minor girls and two women



