ರಾಜ್ಯದಲ್ಲಿ ಹೆಚ್ಚಿದ ‘ಕುಬ್ಜತೆ’ ಆತಂಕ..! 4.25 ಲಕ್ಷ ಕುಬ್ಜ ಕಂದಮ್ಮಗಳ ಪತ್ತೆ: ಉತ್ತರ ಕರ್ನಾಟಕ ಭಾಗದಲ್ಲೇ ಸಮಸ್ಯೆ ಗಂಭೀರ
ರಾಜ್ಯದಲ್ಲಿ ಮಕ್ಕಳಲ್ಲಿ (Children Health) ಪೌಷ್ಠಿಕಾಂಶ ಸುಧಾರಣೆಗೆ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂಗನವಾಡಿಗಳಲ್ಲಿ ಉತ್ತಮ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ವಿತರಿಸಲಾಗುತ್ತಿದೆ. ಗರ್ಭಿಣಿಯಿಂದ ಹಿಡಿದು ಮಕ್ಕಳಿಗೆ ಮೂರು ವರ್ಷ ತುಂಬುವವರೆಗೂ ಮನೆಗೆ ರೇಷನ್ ಕೂಡ ವಿತರಿಸಲಾಗುತ್ತಿದೆ. ಇಷ್ಟೆಲ್ಲ ಸೌಲಭ್ಯಗಳ ನಡುವೆಯೂ ರಾಜ್ಯದ ಮಕ್ಕಳಲ್ಲಿ ಕುಬ್ಜತೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಇತ್ತೀಚಿಗೆ ಹೊರಬಿದ್ದ ವರದಿಯ ಪ್ರಕಾರ, ರಾಜ್ಯದ ಒಟ್ಟೂ 31 ಜಿಲ್ಲೆಗಳ 6 ವರ್ಷದ ಒಳಗಿನ ಮಕ್ಕಳಲ್ಲಿ 4.25 ಲಕ್ಷ ಮಕ್ಕಳು ಕುಬ್ಜತೆ ಸಮಸ್ಯೆ ಹೊಂದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಇನ್ನು ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ಮಕ್ಕಳು ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ದಾಖಲಾದ 32.75 ಲಕ್ಷ ಮಕ್ಕಳ ಪೈಕಿ, ತಪಾಸಣೆಗೊಳಪಡಿಸಲಾಗಿದ್ದು 4,25,827 ಮಕ್ಕಳಲ್ಲಿ ಪೂರ್ಣ ಕುಬ್ಜತೆ ಹಾಗೂ 5,52,606 ಮಕ್ಕಳಲ್ಲಿ ಅರೆ ಕುಬ್ಜತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಹೃದಯ ಜೋಪಾನ..! ಹದಿಹರೆಯದವರಲ್ಲಿ ಹೃದಯಾಘಾತ ಹಿಂದಿನ ಅಸಲಿ ಕಾರಣ ಬಯಲು
ಇನ್ನು ರಾಜ್ಯದ 31 ಜಿಲ್ಲೆಗಳ ಪೈಕಿ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 45,660 ಮಕ್ಕಳು ಕುಬ್ಜತೆ ಸಮಸ್ಯೆ ಹೊಂದಿದ್ದಾರೆ. ಇದಾದ ಬಳಿಕದ ಸ್ಥಾನಗಳನ್ನು ಕಲಬುರಗಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆ ಪಡೆದುಕೊಂಡಿದೆ. ಇನ್ನು ಸಂಪೂರ್ಣ ದೇಶದಲ್ಲಿ ಕುಬ್ಜ ಮಕ್ಕಳನ್ನು ಹೊಂದಿರುವವರ ಸಂಖ್ಯೆಯಲ್ಲಿ ಕರ್ನಾಟಕವು 7 ಸ್ಥಾನದಲ್ಲಿದೆ. ಮೊದಲ ಆರು ಸ್ಥಾನಗಳಲ್ಲಿ ಕ್ರಮವಾಗಿ ಉತ್ತರ ಪ್ರದೇಶ, ಜಾರ್ಖಂಡ್, ಆಸ್ಸಾಂ, ಮಧ್ಯಪ್ರದೇಶ, ತ್ರಿಪುರ ಹಾಗೂ ಮಹಾರಾಷ್ಟ್ರ ರಾಜ್ಯಗಳಿವೆ.



