ಕೊಲೆಸ್ಟ್ರಾಲ್ಗೆ ದಿವ್ಯೌಷಧಿ ದಾಲ್ಚಿನ್ನಿ ನೀರು : ಪ್ರತಿದಿನ ಬೆಳಿಗ್ಗೆ ಕುಡಿಯೋದ್ರಿಂದ ಮಧುಮೇಹಕ್ಕೂ ಭಾರಿ ಪ್ರಯೋಜನ
ಪುಲಾವ್ನಿಂದ ಹಿಡಿದು ದಿನನಿತ್ಯದ ಸಾರು–ಸಾಂಬಾರಿನವರೆಗೆ ಬಳಕೆಯಾಗುವ ದಾಲ್ಚಿನ್ನಿ ಅಪಾರ ಔಷಧಿಯ ಗುಣಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಈ ದಾಲ್ಚಿನ್ನಿಯ ನೀರು ಕುಡಿಯೋದ್ರಿಂದ ಏನೆಲ್ಲಾ ಲಾಭ ಸಿಗುತ್ತದೆ?

ಭಾರತದ ಅಡುಗೆಮನೆ ಅದ್ಭುತ ಔಷಧಿಗಳ ಗಣಿ. ಇಲ್ಲಿ ರುಚಿಯಾದ ಅಡುಗೆ ಸಿದ್ಧವಾಗುವುದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿಯು ಇರುತ್ತದೆ. ರುಚಿಕರವಾದ ಅಡುಗೆಗಾಗಿ ಬಳಸುವ ಮಸಾಲೆಗಳು ಕೇವಲ ಪರಿಮಳ, ರುಚಿಯನ್ನಷ್ಟೇ ಹೆಚ್ಚಿಸದೇ ದೇಹಕ್ಕೆ ಅಪಾರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಅಂತಹ ಮಸಾಲೆಗಳಲ್ಲಿ ದಾಲ್ಚಿನ್ನಿ ಅಥವಾ ಚಕ್ಕೆ ಅತ್ಯಂತ ಮುಖ್ಯವಾಗಿದೆ. ಪುಲಾವ್ನಿಂದ ಹಿಡಿದು ದಿನನಿತ್ಯದ ಸಾರು–ಸಾಂಬಾರಿನವರೆಗೆ ದಾಲ್ಚಿನ್ನಿಯನ್ನು ಬಳಸಲಾಗುತ್ತದೆ. ಇದು ಕೇವಲ ಅಡುಗೆಯ ಸ್ವಾದವನ್ನಷ್ಟೇ ದುಪ್ಪಟ್ಟುಗೊಳಿಸದೇ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಇದರ ಈ ವೈಶಿಷ್ಟ್ಯದಿಂದಲೇ ಇದು ಭಾರತದ ಪ್ರಾಚೀನ ವೈದ್ಯ ಪದ್ಧತಿ ಆಯುರ್ವೇದದಲ್ಲಿಯೂ ಸ್ಥಾನ ಗಳಿಸಿದೆ. ಇಂದಿನ ಅತಿ ವೇಗದ ಜೀವನಶೈಲಿಯಲ್ಲಿ ಕೊಲೆಸ್ಟ್ರಾಲ್, ಸ್ಥೂಲಕಾಯ ಸಾಮಾನ್ಯವಾಗಿದೆ. ಇದೇ ಎಲ್ಲಾ ರೋಗಗಳಿಗು ಮೂಲವಾಗಿದೆ. ಹಾಗಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ದಾಲ್ಚಿನ್ನಿ ನೀರು ಉತ್ತಮವಾಗಿದೆ. ಹೇಗೆ? ಇಲ್ಲಿದೆ ಓದಿ.
ಆರೋಗ್ಯಕ್ಕೆ ದಾಲ್ಚಿನ್ನಿ
ದಾಲ್ಚಿನ್ನಿ ಅಥವಾ ಚಕ್ಕೆ ಉತ್ಕರ್ಷಣಾ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣವನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಂತರರಾಷ್ಟ್ರೀಯ ಜರ್ನಲ್ ನೂಟ್ರಿಷನ್ ರಿಸರ್ಚ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ ಚಕ್ಕೆ ಅಥವಾ ದಾಲ್ಚಿನ್ನಿ ಜೀರ್ಣಕ್ರಿಯೆ ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್ಗಳು ನಾವು ಸೇವಿಸುವ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿದ್ದಾಗ ತೂಕ ಇಳಿಸುವುದು ಕೂಡಾ ಸುಲಭವಾಗುತ್ತದೆ.
ಇದನ್ನೂ ಓದಿ: ಸಲಾಡ್ ಪ್ರಿಯರೇ ಹುಷಾರ್.. ಲೆಟಿಸ್ ಸೊಪ್ಪಿನಿಂದ ಹರಡುತ್ತಿದೆ ‘ಸೈಕ್ಲೋಸ್ಪೊರಿಯಾಸಿಸ್’ ಸೋಂಕು!
ದಾಲ್ಚಿನ್ನಿ ಬಳಸುವುದು ಹೇಗೆ?
ಒಂದು ಕಪ್ ನೀರಿಗೆ ದಾಲ್ಚಿನ್ನಿಯ ಚಿಕ್ಕ ತುಂಡು ಹಾಕಿ ಚೆನ್ನಾಗಿ ಕುದಿಸಿ. ಅದು ಆರಿದ ನಂತರ ಅದನ್ನು ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ದಾಲ್ಚಿನ್ನಿ ನೀರು ಕುಡಿಯುವದರಿಂದ ದೇಹದಲ್ಲಿ ಸಂಗ್ರವಾಗಿರುವ ಕೊಲೆಸ್ಟ್ರಾಲ್ ಅನ್ನು ಸುಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

