EMI ಕಟ್ಟದಿದ್ದರೆ ಮೊಬೈಲ್ ಲಾಕ್? RBI ಹೊಸ ನಿಯಮಗಳ ಚರ್ಚೆ

ಮೊಬೈಲ್ EMI ಪಾವತಿಯಲ್ಲಿ ವಿಳಂಬವಾದರೆ ಫೋನ್‌ ಸೇವೆಗಳನ್ನು ರಿಮೋಟ್ ಮೂಲಕ ನಿಯಂತ್ರಿಸಲು RBI ಹೊಸ ಕರಡು ನಿಯಮಗಳನ್ನು ಮುಂದಿಟ್ಟಿದೆ. ಆದರೆ ತುರ್ತು ಸೇವೆಗಳು ಹಾಗೂ ಕರೆಗಳ ಮೇಲೆ ಯಾವುದೇ ನಿರ್ಬಂಧ ಇರಬಾರದು ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ಮೊಬೈಲ್‌ ಫೋನ್‌, ಟ್ಯಾಬ್ಲೆಟ್‌ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು EMI ಆಧಾರದಲ್ಲಿ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಭಾರತೀಯ ರಿಸರ್ವ್ ಬ್ಯಾಂಕ್‌ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. EMIಗಳನ್ನು ದೀರ್ಘಕಾಲ ಪಾವತಿಸದಿದ್ದರೆ, ಕೆಲವು ಫೋನ್‌ ವೈಶಿಷ್ಟ್ಯಗಳನ್ನು ರಿಮೋಟ್ ಮೂಲಕ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಸಾಲ ನೀಡುವ ಸಂಸ್ಥೆಗಳಿಗೆ ಅವಕಾಶ ನೀಡುವ ಪ್ರಸ್ತಾವನೆ ಇದಾಗಿದೆ.

‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಕಮರ್ಷಿಯಲ್ ಬ್ಯಾಂಕ್‌ಗಳು – ಜವಾಬ್ದಾರಿಯುತ ವ್ಯವಹಾರ ನಡವಳಿಕೆ) ತಿದ್ದುಪಡಿ ಆದೇಶಗಳು 2026’ ಎಂಬ ಹೆಸರಿನಲ್ಲಿ ಈ ಕರಡು ನಿಯಮ ಹೊರಬಿದ್ದಿದೆ. ಅಕ್ಟೋಬರ್‌ 1, 2026ರಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಈ ನಿಯಮದ ಪ್ರಕಾರ, ಸಾಲಗಾರರು 90 ದಿನಗಳ ಕಾಲ EMI ಪಾವತಿಸದಿದ್ದಾಗ ಮಾತ್ರ ಮೊಬೈಲ್‌ ಫೋನ್‌ ವೈಶಿಷ್ಟ್ಯಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಇರುತ್ತದೆ. ಆದರೆ ಅದರ ಮೊದಲು ಗ್ರಾಹಕರಿಗೆ ಹಂತ ಹಂತವಾಗಿ ನೋಟಿಸ್‌ ನೀಡುವುದು ಕಡ್ಡಾಯವಾಗಿದೆ.

EMI ಪಾವತಿ ದಿನಾಂಕ ಮೀರಿ 60 ದಿನಗಳಾದ ನಂತರ ಮೊದಲ ನೋಟಿಸ್‌ ಕಳುಹಿಸಬೇಕು. ಅದರಲ್ಲಿ ಬಾಕಿ ಹಣ ಪಾವತಿಸಲು 21 ದಿನಗಳ ಕಾಲಾವಕಾಶ ನೀಡಬೇಕು. ಬಳಿಕ ಮತ್ತೊಂದು ವಾರದ ಗಡುವಿನೊಂದಿಗೆ ಎರಡನೇ ನೋಟಿಸ್‌ ನೀಡಿದ ನಂತರವೇ ಫೋನ್‌ನ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲು ಅವಕಾಶ ಸಿಗುತ್ತದೆ.

ಗ್ರಾಹಕರ ಸ್ಪಷ್ಟ ಅನುಮತಿ ಇಲ್ಲದೆ ಈ ವಿಧಾನ ಜಾರಿಗೆ ಬರಬಾರದು ಎಂದು RBI ಒತ್ತಿ ಹೇಳಿದೆ. ಸಾಲ ಒಪ್ಪಂದದಲ್ಲೇ ಇದಕ್ಕೆ ಸಂಬಂಧಿಸಿದ ವಿವರಗಳು ಸ್ಪಷ್ಟವಾಗಿ ನಮೂದಿಸಬೇಕೆಂದು ಸೂಚಿಸಿದೆ. ಜೊತೆಗೆ, ಈ ತಂತ್ರಜ್ಞಾನವನ್ನು ಕೇವಲ ಸಾಲ ವಸೂಲಿ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಹೇಳಿದೆ.

ಇಂಟರ್‌ನೆಟ್‌ ಸೇವೆ, ಇನ್‌ಕಮಿಂಗ್ ಕರೆಗಳು, SOS ತುರ್ತು ಸೇವೆಗಳು ಮತ್ತು ಸರ್ಕಾರದ ತುರ್ತು ಎಚ್ಚರಿಕೆ ಸಂದೇಶಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಸ್ಥಗಿತಗೊಳಿಸಬಾರದು ಎಂಬುದು RBIಯ ಪ್ರಮುಖ ಸೂಚನೆಯಾಗಿದೆ. ಗ್ರಾಹಕರು ಬಾಕಿ ಹಣ ಪಾವತಿಸಿದ ಒಂದು ಗಂಟೆಯೊಳಗೆ ನಿರ್ಬಂಧ ತೆರವುಗೊಳಿಸಬೇಕು. ವಿಳಂಬವಾದರೆ ಪ್ರತಿ ಗಂಟೆಗೆ ₹250 ಪರಿಹಾರ ನೀಡಬೇಕಾಗುತ್ತದೆ ಎಂದು ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಮೊಬೈಲ್‌ ಲಾಕ್‌ ಮಾಡಿದ ಸಂದರ್ಭದಲ್ಲೂ ಗ್ರಾಹಕರ ಖಾಸಗಿ ಡೇಟಾವನ್ನು ಬ್ಯಾಂಕ್‌ಗಳು ಅಥವಾ ರಿಕವರಿ ಏಜೆಂಟ್‌ಗಳು ಪ್ರವೇಶಿಸಬಾರದು ಎಂದು RBI ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗ್ರಾಹಕರ ಗೌಪ್ಯತೆಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ.

ಇನ್ನೊಂದೆಡೆ, ರಿಕವರಿ ಏಜೆಂಟ್‌ಗಳ ವರ್ತನೆ ಮೇಲೂ ಕಠಿಣ ನಿಯಮಗಳನ್ನು ತರಲು RBI ಮುಂದಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯೊಳಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಬೆದರಿಕೆ, ಅವಹೇಳನ, ಕುಟುಂಬ ಸದಸ್ಯರಿಗೆ ಕಿರುಕುಳ ನೀಡುವುದು ಅಥವಾ ದುರ್ವ್ಯವಹಾರ ನಡೆಸುವುದು ಸಂಪೂರ್ಣ ನಿಷೇಧಿಸಲಾಗಿದೆ.

ದೇಶದಲ್ಲಿ ಈಗ ಲಕ್ಷಾಂತರ ಮಂದಿ ಸಣ್ಣ ಮೊತ್ತದ ಸಾಲಗಳ ಮೂಲಕ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸುತ್ತಿರುವ ಹಿನ್ನೆಲೆ, ಈ ಹೊಸ ನಿಯಮಗಳು ಕೋಟ್ಯಾಂತರ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories